ಸತತ ಪ್ರಯತ್ನ ಜತೆಗೆ ಕಠಿಣ ಪರಿಶ್ರಮಪಟ್ಟರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇಂದು ಪ್ರಕಟಗೊಂಡ ಯುಪಿಎಸಿ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಅನುಜ್ ಅಗ್ನಿಹೋತ್ರಿ ತಾಜಾ ಉದಾಹರಣೆಯಾಗಿದ್ದಾರೆ.
ಐಎಎಸ್ ಆಗಬೇಕೆಂಬ ಹಂಬಲದೊಂದಿಗೆ ನೂರಾರು ಕನಸುಗಳನ್ನು ಕಟ್ಟಿಕೊಂಡು ಪರೀಕ್ಷೆಗೆ ತಯಾರಿ ನಡೆಸುವ ಲಕ್ಷಾಂತರ ವಿದ್ಯಾರ್ಥಿಗಳಿಗೆ 26 ವರ್ಷದ ಅನುಜ್ ಅಗ್ನಿಹೋತ್ರಿ ಸ್ಫೂರ್ತಿಯಾಗಿದ್ದಾರೆ.
ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯ ರಾವತ್ ಭಾಟಾ ಮೂಲದವರಾದ ಅನುಜ್ ತಮ್ಮ ಮೂರನೇ ಪ್ರಯತ್ನದಲ್ಲಿ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ.
2023ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅನುಜ್ ಯುಪಿಎಸ್‌ಸಿ ಪರೀಕ್ಷೆಯನ್ನು ಉತ್ತೀರ್ಣರಾಗಿ 400ನೇ ರ‍್ಯಾಂಕ್ ಪಡೆದಿದ್ದರು. ಅವರನ್ನು ಕೇಂದ್ರಾಡಳಿತ ಪ್ರದೇಶ ಸೇವೆಗಳಲ್ಲಿ ನೇಮಕ ಮಾಡಲಾಗಿತ್ತು. ಬಳಿಕ ಮತ್ತೇ 2024ರಲ್ಲಿ ಪರೀಕ್ಷೆ ಬರೆದು ಸಂದರ್ಶನಕ್ಕೆ ಹಾಜರಾಗಿದ್ದರು ಆದರೆ, ಅದು ವಿಫಲವಾಗಿತ್ತು.
2025ರಲ್ಲಿ ಮತ್ತೇ ಕಠಿಣ ಪರಿಶ್ರಮದೊಂದಿಗೆ ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ನಡೆಸಿ ಮರಳಿ ಯತ್ನಿಸಿದರು. ಅದೇ ಅವರ ಸತತ ಪ್ರಯತ್ನ ಇಂದು ಭಾರತಕ್ಕೆ ಮೊದಲ ರ‍್ಯಾಂಕ್ ಬರುವಂತೆ ಮಾಡಿದೆ.
ಶಿಕ್ಷಣ: ವೃತ್ತಿಯಿಂದ ವೈದ್ಯರಾದ ಅನುಜ್, 2023ರಲ್ಲಿ ಏಮ್ಸ್ ಜೋಧ್‌ಪುರದಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಪದವಿ ಪೂರೈಸುತ್ತಿದ್ದಂತೆ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಅವರು ಮೊದಲ ಪಯತ್ನದಲ್ಲಿಯೇ ಯಶಸ್ವಿಯಾಗಿದ್ದರು.
ಕುಟುಂಬ: ಅನುಜ್ ತಂದೆ ಕೆ.ಬಿ. ಅಗ್ನಿಹೋತ್ರಿ ಅವರು ರಾವತ್‌ಭಾಟಾದಲ್ಲಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ತಾಯಿ ಮಂಜು ಅಗ್ನಿಹೋತ್ರಿ ಗೃಹಿಣಿ.




















