ಉತ್ತರ ಪ್ರದೇಶದ ವಾರಣಾಸಿ ನಗರದ ಗಂಗಾ ನದಿಯ ಮಧ್ಯೆ ದೋಣಿಯಲ್ಲಿ ಇಫ್ತಾರ್ ಕೂಟ ನಡೆಸಿದ ವಿಡಿಯೋ ವೈರಲ್ ಆಗಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಪಂಚಗಂಗಾ ಘಾಟ್ ಸಮೀಪದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿ 14 ಮಂದಿ ಮುಸ್ಲಿಂ ಯುವಕರು ರಂಜಾನ್ ಸಂದರ್ಭದಲ್ಲಿ ಉಪವಾಸ ಬಿಡುತ್ತಿರುವುದು ಕಾಣಿಸಿಕೊಂಡಿದೆ. ಕೆಲವರು ಇದನ್ನು ವೈಯಕ್ತಿಕ ಧಾರ್ಮಿಕ ಆಚರಣೆ ಎಂದು ಸಮರ್ಥಿಸಿದರೆ, ಇನ್ನೂ ಕೆಲವರು ಗಂಗಾ ನದಿಯ ಪವಿತ್ರತೆಗೆ ವಿರುದ್ಧ ಎಂದು ಟೀಕಿಸಿದ್ದಾರೆ.
ದೂರು ದಾಖಲು: ಭಾರತೀಯ ಜನತಾ ಯುವ ಮೋರ್ಚಾ ವಾರಾಣಾಸಿ ಅಧ್ಯಕ್ಷ ರಾಜತ್ ಜೈಸ್ವಾಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ, ದೋಣಿಯಲ್ಲಿ ಚಿಕನ್ ಬಿರಿಯಾನಿ ಸೇರಿದಂತೆ ಮಾಂಸಾಹಾರ ಸೇವನೆ ಮಾಡಲಾಗಿದೆ ಮತ್ತು ಮೂಳೆಗಳನ್ನು ಗಂಗಾ ನದಿಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಕ್ರಮ: ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಡಿಯೋದಲ್ಲಿ ಕಾಣಿಸಿಕೊಂಡ 14 ಜನರನ್ನು ವಶಕ್ಕೆ ಪಡೆದಿದ್ದಾರೆ. ಎಸಿಪಿ ವಿಜಯ್ ಪ್ರತಾಪ್ ಸಿಂಗ್ ಅವರು, “ಘಟನೆಯ ಬಗ್ಗೆ ಆರೋಪ ಬಂದ ತಕ್ಷಣ ವಿವಿಧ ತಂಡಗಳನ್ನು ನಿಯೋಜಿಸಿ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ 14 ಜನರನ್ನು ವಶಕ್ಕೆ ಪಡೆದು, ತನಿಖೆ ನಡೆಸಿದ್ದೇವೆ” ಎಂದು ಹೇಳಿದ್ದಾರೆ.





















