ಕೊಪ್ಪಳ(ಗಂಗಾವತಿ): ಆಡಳಿತರೂಢ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ವಿಧಾನಸಭಾ ಕ್ಷೇತ್ರಗಳಿಗೆ 50 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಮುಂದಿನ ಸಿಎಂ ಆಯ್ಕೆಗೆ ಸಂಬಂಧಿಸಿದಂತೆ ಆಡಳಿತರೂಢ ಶಾಸಕರಲ್ಲಿಯೇ ಕುದುರೆ ವ್ಯಾಪಾರ ಜೋರಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ತಾಲೂಕಿನ ಮರಳಿ ಬಳಿಯ ರಿಚ್ ಕೌಂಟಿ ಹೋಟಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸ್ವ-ಪ್ರತಿಷ್ಟೆಗಾಗಿ ಮೈಸೂರು ಸಮಾವೇಶ ಆಯೋಜಿಸಿ ಮುಖ್ಯಮಂತ್ರಿಗಳ ಬದಲಾವಣೆ ಸುಳಿವು ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ನಾಯಕ ರಣದೀಪ ಸುರ್ಜೇವಾಲ್ ಪದೇ ಪದೇ ರಾಜ್ಯಕ್ಕೆ ಬಂದು ಸಚಿವರುಗಳ ಪರಾಮರ್ಶೆ, ಶಾಸಕರ ಕ್ಷೇತ್ರಕ್ಕೆ ಅನುದಾನದ ಕುರಿತು ಚರ್ಚಿಸುತ್ತಿದ್ದಾರೆ. ಮುಂದಿನ ಸಿಎಂ ಆಯ್ಕೆಗೆ ಹೆಣಗಾಡುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಹೋರಾಟದಿಂದಲೇ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡುವಂತಾಯಿತು. ಹಗರಣದ ತನಿಖೆ ಇನ್ನುನಡೆಯುತ್ತಿದೆ. ಕೊಪ್ಪಳ ಕೆಆರ್‌ಡಿಐಎಲ್ 72 ಕೋಟಿ ರೂ. ಹಗರಣ ತನಿಖೆಗೆ ಆಗ್ರಹಿಸಿದ್ದೇವೆ ಎಂದು ಹೇಳಿದರು.
ಶ್ರೀರಾಮುಲು, ಶಾಸಕ ಗಾಲಿ ಜನಾರ್ದನ ರೆಡ್ಡಿ, ಇಬ್ಬರೂ ಪಕ್ಷದ ಆಸ್ತಿ. ಅವರಿಬ್ಬರೂ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಹೆಚ್ಚಿನ ಮಟ್ಟದ ಶಾಸಕರನ್ನು ಆಯ್ಕೆ ಮಾಡುವಲ್ಲಿ ಶ್ರಮಿಸಿರುವುದನ್ನು ಮರೆಯುವಂತಿಲ್ಲ. ಬಿಜೆಪಿ ಮುಂಬರುವ ದಿನದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸರ್ವರು ಪ್ರಯತ್ನಿಸೋಣ ಎಂದರು.