ದಾವಣಗೆರೆ: ವಿಪಕ್ಷಗಳು ದಾಖಲೆ ಇಟ್ಟುಕೊಂಡು ಆರೋಪ ಮಾಡಬೇಕೇ ವಿನಃ ಯಾವುದೇ ದಾಖಲೆಗಳು ಇಲ್ಲದೇ ಆರೋಪ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು.
ನಗರದ ಎಂಬಿಎ ಮೈದಾನದಲ್ಲಿರುವ ಹೆಲಿಪ್ಯಾಡ್ ನಲ್ಲಿ ವಿಧಾನಸೌಧದಲ್ಲಿ ಶೇ.60ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಆರೋಪ ಮಾಡಿರುವುದನ್ನು ಮೊದಲು ಸಾಬೀತು ಮಾಡಬೇಕು. ಬರೀ ಆರೋಪ ಮಾಡುವುದು ಅಷ್ಟೇ ಅಲ್ಲ, ಅದನ್ನು ಸಾಬೀತು ಮಾಡಬೇಕು ಎಂದು ಚಾಟಿ ಬೀಸಿದರು.
ವಿರೋಧ ಪಕ್ಷಗಳು ಆರೋಪ ಮಾಡುವಾಗ ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಬೇಕು. ಅದನ್ನು ಬಿಟ್ಟು ಬರೀ ಸುಳ್ಳು ಆರೋಪ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಮಾಡಿದರೆ ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡುವುದನ್ನು ವಿಪಕ್ಷಗಳು ಮೊದಲು ಕಲಿಯಲಿ ಎಂದು ವಿಪಕ್ಷಗಳಿಗೆ ಸಲಹೆ ನೀಡಿದರು.
ಬಸ್ ದರ ಏರಿಕೆ ಅನಿವಾರ್ಯ: ಬಸ್ ದರ ಏರಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪೆಟ್ರೋಲ್, ಡೀಸೆಲ್ ಸೇರಿದಂತೆ ಬೇರೆ ಬೇರೆ ದರಗಳು ಹೆಚ್ಚಾದಾಗ ಬಸ್ ದರ ಹೆಚ್ಚಳ ಮಾಡುವುದು ಅನಿವಾರ್ಯ ಆಗುತ್ತದೆ. ಈ ಹಿಂದಿನ ಎಲ್ಲಾ ಸರ್ಕಾರಗಳು ಆಯಾ ಕಾಲಘಟ್ಟದಲ್ಲಿ ಬಸ್ ದರ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಈಗ ಬಸ್ ದರ ಹೆಚ್ಚಳ ಮಾಡಲಾಗಿದೆ. ಅಷ್ಟೇ ಅಲ್ಲದೇ, ಸಂಸ್ಥೆಯ ಸಿಬ್ಬಂದಿಗಳಿಗೆ ವೇತನ ನೀಡಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಸ್ ದರ ಏರಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡರು.
ಸಚಿವ ಸಂಪುಟ ಬದಲಾವಣೆ: ಸಚಿವ ಸಂಪುಟ ಪುನರ್ ರಚನೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ನೋಡಣ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾವು ರೆಡಿ: ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಆದರೆ ಈ ವಿಷಯ ಹೈಕೋರ್ಟ್ ನಲ್ಲಿ ಇರುವುದರಿಂದ ತಡವಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧ:
ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿ ನಿಖರ ಮಾಹಿತಿ ಸಂಗ್ರಹಕ್ಕೆ ನಿವೃತ್ತ ನ್ಯಾಯಮೂರ್ತಿ ಡಾ.ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿದ್ದು, ಈಗಾಗಲೇ ನಿಖರ ಮಾಹಿತಿ ಸಂಗ್ರಹಿಸಲು ಆಯೋಗ ಕಾರ್ಯೋನ್ಮುಖವಾಗಿದೆ. ವರದಿ ಸಲ್ಲಿಸಿದ ಮೇಲೆ ಒಳಮೀಸಲಾತಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ಊಟಕ್ಕೆ ಸೇರೋದು ಅಪರಾಧನಾ?: ಇತ್ತೀಚೆಗೆ ಸಚಿವ ಸತೀಶ್ ಜಾರಕಿ ಹೊಳಿ ನಿವಾಸದಲ್ಲಿ ಸಚಿವರು, ಶಾಸಕರು ಭೋಜನ ಸವಿದ ಬಗ್ಗೆ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಊಟಕ್ಕೆ ಸೇರೋದು ತಪ್ಪಾ, ನೀವು ಸೇರಿ ಊಟ ಮಾಡೋದಿಲ್ವಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ ಮುಖ್ಯಮಂತ್ರಿಗಳು, ಊಟಕ್ಕೆ ಸೇರಿದ ಮೇಲೆ ಬಣ್ಣ ಕಟ್ಟುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಭೈರತಿ ಸುರೇಶ್, ಮಾಜಿ ಸಚಿವ ಎಚ್.ಆಂಜನೇಯ, ಎಚ್.ಎಂ.ರೇವಣ್ಣ, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಸವರಾಜ ಶಿವಗಂಗಾ, ಡಿ.ಜಿ.ಶಾಂತನಗೌಡ, ಬಿ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಐಜಿಪಿ ರಮೇಶ್, ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.