ಬೆಂಗಳೂರು: ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಯಶಸ್ಸಿನ ಬೆನ್ನಲ್ಲೇ ಅಂಧತ್ವ ಹೊಂದಿರೋ ವಿಶೇಷ ಚೇತನರಿಗೆ ಕರ್ನಾಟಕ ಸರಕಾರ ಗುಡ್ ನ್ಯೂಸ್ ನೀಡಿದೆ.
ರಾಜ್ಯ ಸಾರಿಗೆ 4 ನಿಗಮಗಳಲ್ಲಿ ರಾಜ್ಯವ್ಯಾಪಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಬಗ್ಗೆ ಖುದ್ದು ಸಾರಿಗೆ ಸಚಿವರೇ ನಿಗಮಗಳಿಗೆ ಸೂಚಿಸಿದ್ದು, ಶೀಘ್ರ ಈ ಕ್ರಮಕ್ಕೆ ಆದೇಶಿಸಿದ್ದಾರೆ.
ಈ ಸೌಲಭ್ಯ ರಾಜ್ಯಾದ್ಯಂತ ಲಭ್ಯವಾಗಲಿದ್ದು, ಈ ನಿರ್ಧಾರದಿಂದ ಅಂಧತ್ವ ಹೊಂದಿರುವ ಲಕ್ಷಾಂತರ ವಿಶೇಷ ಚೇತನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮೊದಲು 4 ನಿಗಮಗಳ ಪೈಕಿ ಯಾವ ನಿಗಮದ ಬಸ್‌ಪಾಸ್ ಹೊಂದಿದ್ದರೋ ಆ ನಿಗಮದ ಬಸ್‌ನಲ್ಲಿ ಮಾತ್ರ ಅಂಧತ್ವ ಇದ್ದವರು ಓಡಾಡಲು ಅವಕಾಶ ಇತ್ತು. ಹೀಗಾಗಿ ಬೇರೆ ನಿಗಮದ ಬಸ್‌ಗಳಲ್ಲಿ ಪ್ರಯಾಣಿಸಲು ಹಣ ಪಾವತಿಸಬೇಕಿತ್ತು.
ಆದರೆ, ಈ ಯೋಜನೆಯಿಂದ ಉಚಿತವಾಗಿ ರಾಜ್ಯದ ನಾಲ್ಕು ನಿಗಮದ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಅಂಧ ಪ್ರಯಾಣಿಕರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಯಾವುದಾದರೂ ಒಂದು ನಿಗಮದಲ್ಲಿನ ಪಾಸ್ ಹೊಂದಿದ್ದರೂ ಅದನ್ನೇ ತೋರಿಸಿ ರಾಜ್ಯದ ಎಲ್ಲಡೆ ಉಚಿತವಾಗಿ ಅಂಧರು ಪ್ರಯಾಣಿಸಬಹುದು.
ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಅತ್ಯಂತ ಜನಪ್ರಿಯವಾಗಿದ್ದು, ಈ ಯೋಜನೆಯಂತೆ ಅಂಧರಿಗೂ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಲಾಗಿದೆ.