ಹುಬ್ಬಳ್ಳಿ: “ಮಹದಾಯಿ ನದಿ ನೀರು ಹಂಚಿಕೆಯ ವಿಚಾರವಾಗಿ ಗೋವಾ ಮುಖ್ಯಮಂತ್ರಿಗಳು ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ವಿಧಾನಸಭೆ ವಿರೋಧಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಹಿಂದೆ ಸೋನಿಯಾ ಗಾಂಧಿ ಗೋವಾದಲ್ಲಿ ನಿಂತುಕೊಂಡು, ‘ಕರ್ನಾಟಕಕ್ಕೆ ಹನಿ ನೀರನ್ನೂ ಕೊಡುವುದಿಲ್ಲ’ ಎಂದು ಹೇಳಿದ್ದರು. ಅವರು ಹೇಳಿದ ತಕ್ಷಣ ಏನೂ ಆಗುವುದಿಲ್ಲ ಎಂಬುದನ್ನು ಗೋವಾ ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು. ಏನೇ ಆದರೂ ನಮ್ಮ ದಾಖಲಾತಿಗಳು, ಕಾಗದ ಪತ್ರಗಳಿಂದ ನಮಗೆ ಜಯ ಸಿಗಲಿದೆ. ಹೀಗಾಗಿ ಕರ್ನಾಟಕದ ಸಿಎಂ ಮತ್ತು ಡಿಸಿಎಂ ಅನಗತ್ಯ ರಾಜಕಾರಣ ಮಾಡುವುದನ್ನು ಬಿಟ್ಟು, ಯೋಜನೆಗೆ ಪೂರಕವಾಗಬಲ್ಲ ದಾಖಲಾತಿಗಳನ್ನು ಕೇಂದ್ರಕ್ಕೆ ಸಲ್ಲಿಸಲಿ” ಎಂದು ಆಗ್ರಹಿಸಿದರು.
“ಧರ್ಮಸ್ಥಳಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕೊಲೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಅದರಿಂದ ಸತ್ಯಾಸತ್ಯತೆ ಹೊರ ಬರಲಿದೆ. ಆದರೆ, ಪೂರ್ವಾಗ್ರಹ ಪೀಡಿತ ತನಿಖೆ ಆಗಬಾರದು” ಎಂದು ಆತಂಕ ವ್ಯಕ್ತಪಡಿಸಿದರು.
“ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಡುವಿನ ಮುಸುಕಿನ ಗುದ್ದಾಟ ಈಗ ಬಹಿರಂಗಗೊಂಡಿದೆ. ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ರಾಜಕೀಯ ಕ್ರಾಂತಿ ಆಗಲಿದೆ” ಎಂದು ಭವಿಷ್ಯ ನುಡಿದರು. ಆನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ ಅಥವಾ ಸತೀಶ ಜಾರಕಿಹೊಳಿ ಬರ್ತಾರಾ? ಎಂಬುದನ್ನು ಕಾದು ನೋಡಬೇಕಿದೆ” ಎಂದರು.
ಮಹದಾಯಿ ಸಂವೇದನಾಶೀಲ ವಿಷಯ: ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. “ಮಹದಾಯಿ ವಿಷಯವು ನಮಗೆ ಅತ್ಯಂತ ಸಂವೇದನಾಶೀಲವಾಗಿದೆ. ಈ ವಿಷಯದಲ್ಲಿ ನಾವು ಸಂಪೂರ್ಣ ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ಗೋವಾ ವಿಧಾನಸಭಾ ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಹದಾಯಿ ವಿಷಯದಲ್ಲಿ ಕರ್ನಾಟಕದ ಕಾಂಗ್ರೆಸ್ ನಾಯಕರು ನಿರಾಸೆಯಿಂದ ಗೋವಾ ಸರ್ಕಾರದ ಮೇಲೆ ಟೀಕೆ ಮಾಡುತ್ತಿದ್ದಾರೆ. ಅವರ ಮಾತಿನಲ್ಲಿ ಕೆಳಮಟ್ಟದ ಭಾಷೆ ಕಂಡುಬರುತ್ತದೆ. ಇಂತಹ ಹೇಳಿಕೆ ನೀಡುವಲ್ಲಿ ಒಬ್ಬರಿಗೊಬ್ಬರು ಸ್ಪರ್ಧೆಯೊಡ್ಡಿದಂತೆ ಕಂಡುಬರುತ್ತಿದೆ” ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಯ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
“ಅವರು ಏನು ಬೇಕಾದರೂ ಮಾತನಾಡಬಹುದು, ಅದಕ್ಕೆ ನಾನು ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ಯಾರು ಏನು ಹೇಳುತ್ತಾರೆಂಬ ಚಿಂತೆಯಿಲ್ಲ. ಅವರು ತಮ್ಮ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತಿದ್ದಾರೆ. ಮಹದಾಯಿ ರಕ್ಷಿಸುವ ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ” ಎಂದರು.