ಸೌತೆಕಾಯಿ, ಬಾಳೆ ಹಣ್ಣಿನ ಜೊತೆ ಬೆಂಗಳೂರಿನಿಂದ ಜಪಾನ್ ವಿಮಾನ ಏರಿದ ಆನೆಗಳು!

0
107

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ 4 ಆನೆಗಳು ಸೌತೆಕಾಯಿ ಮತ್ತು ಬಾಳೆಹಣ್ಣಿನ ಜತೆಗೆ ವಿಮಾನದ ಮೂಲಕ ಜಪಾನ್‌ಗೆ ಪ್ರಯಾಣ ಮಾಡಲಿವೆ.

ಅಂತಾರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯ ಅಡಿಯಲ್ಲಿ 4 ಆನೆಗಳು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಜಪಾನ್‌ನ ಹಿಮೇಜಿ ಸೆಂಟ್ರಲ್ ಸಫಾರಿ ಪಾರ್ಕ್‌ಗೆ ಕಳುಹಿಸಲಾಗುತ್ತಿದೆ. ಆನೆಗಳ ಜತೆಗೆ ಇವುಗಳ ಆರೈಕೆಗಾಗಿ ತಜ್ಞರ ತಂಡವು ಪ್ರಯಾಣ ಬೆಳೆಸಲಿದೆ.

ಜಪಾನ್‌ಗೆ ತೆರಳುತ್ತಿರುವ 4 ಆನೆಗಳಿಗೂ ವಿಮಾನ ಪ್ರಯಾಣಕ್ಕೆ ಹೊಂದಿಕೊಳ್ಳುವಂತೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಕಳೆದ 6 ತಿಂಗಳುಗಳಿಂದ ಈ ಸಾಗಣೆಗಾಗಿ ಪ್ರಾಣಿಗಳಿಗೆ ತರಬೇತಿ ನೀಡಲಾಗಿದೆ.

ವಿಮಾನ ಪ್ರಯಾಣಕ್ಕೂ ಮುನ್ನ ಎಲ್ಲ ಆನೆಗಳಿಗೂ ಆಹಾರ ನೀಡಲಾಗುತ್ತದೆ. 8 ಗಂಟೆಗಳ ವಿಮಾನ ಪ್ರಯಾಣ ಇದಾಗಿದ್ದು ಈ ಪ್ರಯಾಣದ ವೇಳೆ ಆನೆಗಳಿಗೆ ಸೌತೆಕಾಯಿ ಮತ್ತು ಬಾಳೆಹಣ್ಣು ನೀಡಲಾಗುತ್ತದೆ. ಹೀಗಾಗಿ ಆನೆಗಳ ಜತೆ ಅವುಗಳ ಆಹಾರವಾಗಿ ಸೌತೆಕಾಯಿ ಮತ್ತು ಬಾಳೆಹಣ್ಣು ಕೂಡ ಸಾಗಿಸಲಾಗುತ್ತಿದೆ.

ಒಂದು ಗಂಡು ಮತ್ತು ಮೂರು ಹೆಣ್ಣಾನೆ ಸೇರಿದಂತೆ ಜಪಾನ್‌ಗೆ 4 ಆನೆಗಳನ್ನು ನೀಡಲಾಗುತ್ತಿದೆ. 8 ವರ್ಷದ ಸುರೇಶ್, 9 ವರ್ಷದ ಗೌರಿ, 7 ವರ್ಷದ ಶ್ರುತಿ ಮತ್ತು 5 ವರ್ಷದ ತುಳಸಿ ಆನೆಗಳನ್ನು ಕಳುಹಿಸಲಾಗುತ್ತಿದೆ. ವಿಮಾನ ಪ್ರಯಾಣದ ಬಳಿಕ ಆನೆಗಳಿಗೆ ದೈನಂದಿನ ಆಹಾರ ಒದಗಿಸಲಾಗುವುದು. ಅಲ್ಲದೇ ಬನ್ನೇರುಘಟ್ಟದ ಸಿಬ್ಬಂದಿಯೇ ಆರಂಭದಲ್ಲಿ ಎಲ್ಲ ಆರೈಕೆಯನ್ನು ಮಾಡಲಿದ್ದಾರೆ.

ಪ್ರಾಣಿ ವಿನಿಮಯ ಯೋಜನೆಯಲ್ಲಿ ಆನೆಗಳ ಪ್ರತಿಯಾಗಿ, BBP 4 ಚಿರತೆಗಳು, 4 ಜಾಗ್ವಾರ್‌ಗಳು, 4 ಪೂಮಾಗಳು, 3 ಚಿಂಪಾಂಜಿಗಳು ಮತ್ತು 8 ಕಪ್ಪು-ಕ್ಯಾಪ್ಡ್ ಕ್ಯಾಪುಚಿನ್ ಕೋತಿಗಳನ್ನು ಸ್ವೀಕರಿಸಲಿದೆ.

ಬನ್ನೇರುಘಟ್ಟದಿಂದ ಜಪಾನ್‌ಗೆ ತೆರಳಲಿರುವ ಎಲ್ಲ ಆನೆಗಳು ಅಲ್ಲಿನ ವಾತಾವರಣ, ಪರಿಸರ ಮತ್ತು ಆಹಾರಕ್ಕೆ ಹೊಂದಾಣಿಕೆಯಾದ ಬಳಿಕವಷ್ಟೇ ಸಿಬ್ಬಂದಿ ಹಿಂದಿರುಗಲಿದ್ದಾರೆ. ಅಲ್ಲಿಯವರೆಗೂ ಅವರು ಜಪಾನಿನಲ್ಲಿಯೇ ಇದ್ದು ಆನೆಗಳ ಆರೈಕೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.

ಆನೆ ಆರೈಕೆಗೆ ತಂಡ: ಹಿಮೇಜಿ ಸಫಾರಿ ಪಾರ್ಕ್‌ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ, ಒಬ್ಬ ಜೀವಶಾಸ್ತ್ರಜ್ಞೆ ಆನೆಗಳೊಂದಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲದೇ ಮೇ 12 ರಿಂದ 25 ರವರೆಗೆ ಹಿಮೆಜಿ ಸೆಂಟ್ರಲ್ ಪಾರ್ಕ್‌ನ ಆನೆ ಪಾಲಕರಿಗೆ ಬಿಬಿಪಿಯಲ್ಲಿ ತರಬೇತಿಯನ್ನು ನೀಡಲಾಗಿದೆ.

ಎರಡನೇ ಬ್ಯಾಚ್: ಮೇ 2021ರಲ್ಲಿ ಮೈಸೂರು ಮೃಗಾಲಯದಿಂದ ಜಪಾನ್‌ನ ಟೊಯೊಹಾಶಿ ಮೃಗಾಲಯಕ್ಕೆ 3 ಆನೆಗಳನ್ನು ಕಳುಹಿಸಲಾಗಿತ್ತು. ಇದಾದ ಬಳಿಕ, ಇದು ಜಪಾನ್‌ಗೆ ಆನೆಗಳ ವಿನಿಮಯದ ಮೂಲಕ ತೆರಳುತ್ತಿರುವ ಎರಡನೇ ಬ್ಯಾಚ್ ಆಗಿದೆ. ಈ ಆನೆಗಳ ವಿನಿಮಯವು ಜೈವಿಕ ವೈವಿಧ್ಯ ಸಂರಕ್ಷಣೆ ಹಾಗೂ ಮೃಗಾಲಯಗಳ ಸಹಕಾರಕ್ಕೆ ಹೊಸ ಮೈಲುಗಲ್ಲು ಸ್ಥಾಪಿಸಿದೆ.

Previous articleಜಾಮೀನು ಅರ್ಜಿ ವಿಚಾರಣೆ: ನಟ ದರ್ಶನ್‌ಗೆ ಜೈಲೋ? ಬೇಲೋ?, ಹತ್ತು ದಿನಗಳಲ್ಲಿ ಸುಪ್ರೀಂ ಆದೇಶ
Next articleಇಂಜಿನಿಯರಿಂಗ್ ಪದವಿ ಮುಗಿಸಿದ ಶೇ 83ರಷ್ಟು ಜನರಿಗೆ ಕೆಲಸವೇ ಇಲ್ಲ!

LEAVE A REPLY

Please enter your comment!
Please enter your name here