Axiom-4: 22.5 ಗಂಟೆಗಳ ಪ್ರಯಾಣದ ಬಳಿಕ ಭೂಮಿಗೆ ಬಂದಿಳಿದ ಶುಕ್ಲಾ ತಂಡ

0
46

ನವದೆಹಲಿ: ಭಾರತೀಯ ಮೂಲದ ಗಗನಯಾತ್ರಿ ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್ ಆಗಿದ್ದು, ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಬಂದಿಳಿದಿದ್ದಾರೆ.

ಒಟ್ಟು 22.5 ಗಂಟೆಗಳ ಪ್ರಯಾಣ ಬಳಿಕ ಇಂದು ಮಧ್ಯಾಹ್ನ ಪೆಸಿಫಿಕ್ ಮಹಾಸಾಗರದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಸ್ಪ್ಲ್ಯಾಷ್‌ ಡೌನ್ ಯಶಸ್ವಿಯಾಗಿದ್ದು, ಸುರಕ್ಷಿತವಾಗಿ ಶುಭಾಂಶು ಶುಕ್ಲಾ ಹಾಗೂ ಇನ್ನುಳಿದ ಮೂವರು ಗಗನಯಾತ್ರಿಗಳು ಭೂಮಿಗೆ ಬಂದಿಳಿದಿದ್ದಾರೆ.

ಜೂನ್ 25, 2025ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ ನ ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಮಾಡಲಾಗಿತ್ತು. ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಹಲವು ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸವಿದ್ದ ತಂಡವು ಇಂದು ಭೂಮಿಗೆ ಮರಳಿದೆ.

ಶುಭಾಂಶು ಶುಕ್ಲಾ ಪೋಷಕರು ಈ ಖುಷಿ ಕ್ಷಣವನ್ನು ಲಕ್ನೋದಲ್ಲಿರುವ ಸಿಟಿ ಮಾಂಟೆಸರಿ ಶಾಲೆಯಲ್ಲಿ ನೇರ ವೀಕ್ಷಣೆ ಮಾಡಿದರು. 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಇದೀಗ ಹಿಂದಿರುಗಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್‌ಡೌನ್ ಮಾಡಿದೆ.

ಕ್ಯಾಪ್ಸುಲ್ ಲ್ಯಾಂಡ್ ಆಗುವ ಮುನ್ನ ಅದರ ವೇಗ ನಿಯಂತ್ರಿಸಿ ಪ್ಯಾರಾಚೂಟ್ ಮೂಲಕ ಸಮುದ್ರದಲ್ಲಿ ಸ್ಪ್ಲಾಶ್ ಡೌನ್ ಮಾಡಲಾಯಿತು. ಕ್ಯಾಪ್ಸುಲ್ ಲ್ಯಾಂಡ್ ಆಗಿ 2 ಗಂಟೆಗಳ ಕಾಲ ಅದನ್ನು ಓಪನ್ ಮಾಡುವುದಿಲ್ಲ. ಆನಂತರ ಸ್ಟ್ರೇಚ್ಚರ್‌ನಲ್ಲಿ ಮಲಗಿಸಿ ಕರೆತಂದು ವೈದ್ಯಕೀಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುತ್ತದೆ. ಗಗನಯಾತ್ರಿಗಳಿಗೆ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು 7 ದಿನಗಳ ವಿಶ್ರಾಂತಿಯ ಅವಶ್ಯಕತೆಯಿರುತ್ತದೆ.

ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವ ಮುನ್ನ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾವನಾತ್ಮಕ ಬೀಳ್ಕೊಡುಗೆ ಸಿಕ್ಕಿತ್ತು. ಶುಭಾಂಶು ಶುಕ್ಲಾ “ಸಾರೇ ಜಹಾನ್ ಸೆ ಅಚ್ಚಾ” ಎಂದು ಬಾಹ್ಯಾಕಾಶದಲ್ಲಿ ಭಾರತವನ್ನು ಭಾವನಾತ್ಮಕವಾಗಿ ಹೊಗಳಿದರು. ಈ ವೇಳೆ ರಾಕೇಶ್ ಶರ್ಮಾ 41 ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ ಸಮಯವನ್ನು ನೆನಪಿಸಿಕೊಂಡು, ಅಲ್ಲಿಂದ ಭಾರತ ಹೇಗೆ ಕಾಣುತ್ತದೆ ಎಂದು ವಿವರಿಸಿದ್ದಾರೆ.

ಶುಭಾಂಶು ಶುಕ್ಲಾ ಅವರು ಐಎಸ್‌ಎಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಮತ್ತು 1984 ರಲ್ಲಿ ಹಾರಾಟ ನಡೆಸಿದ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ನಂತರ ಬಾಹ್ಯಾಕಾಶದಲ್ಲಿ ಎರಡನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ.

‘Sprouting in Space’ ನಲ್ಲಿ ಶುಭಾಂಶು ಶುಕ್ಲಾ ಅವರು ಏಳು ಪ್ರಯೋಗಗಳನ್ನು ನಡೆಸಿದ್ದಾರೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯು ನಷ್ಟವನ್ನು ಡಿಕೋಡಿಂಗ್, ಮೆದುಳು-ಕಂಪ್ಯೂಟರ್ ಇಂಟರ್ಫೇಸ್ ಅನ್ನು ಅಭಿವೃದ್ಧಿಪಡಿಸುವುದು ಮತ್ತು ‘ಹೆಸರುಕಾಳು’ ಮತ್ತು ‘ಮೆಂತ್ಯೆ ಬೀಜ’ ಬಾಹ್ಯಾಕಾಶದಲ್ಲಿ ಮೊಳೆಕೆ ಯೊಡೆಯುವ ಪ್ರಯೋಗ ನಡೆಸಿದ್ದಾರೆ. ಈ ಮೊಳಕೆ ಕಾಳು ಬಾಹ್ಯಾಕಾಶಯಾನಿಗಳಿಗೆ ತಾಜಾ ಮತ್ತು ಪೌಷ್ಟಿಕಾಂಶ ಆಹಾರ ಪೂರೈಸಲು ಸಹಾಯಕವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಐಎಸ್‌ಎಸ್‌ನಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಾಗೂ ಕೇರಳ ಮತ್ತು ಲಕ್ನೋದ ವಿದ್ಯಾರ್ಥಿಗಳೊಂದಿಗೆ ಶುಕ್ಲಾ ಸಂವಹನ ನಡೆಸಿದ್ದರು.

Previous articleಪರಶುರಾಮ ಥೀಮ್ ಪಾರ್ಕ್‌: ಯೋಜನೆ ಪೂರ್ಣಗೊಳಿಸುತ್ತೇವೆ ಶಾಸಕರ ಘೋಷಣೆ
Next articleNamma Metro: ಹೆಬ್ಬಾಳದಲ್ಲಿ ನಮ್ಮ ಮೆಟ್ರೋಗೆ 45 ಅಲ್ಲ ಕೇವಲ 9 ಎಕರೆ ಜಾಗ

LEAVE A REPLY

Please enter your comment!
Please enter your name here