ರಾಯ್‌ಪುರ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪುತ್ರ ಚೈತನ್ಯರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಶುಕ್ರವಾರ ಬೆಳಗ್ಗೆ ಭಿಲಾಯಿ ಪಟ್ಟಣದಲ್ಲಿರುವ ಚೈತನ್ಯ ಬಘೇಲ್ ಮನೆಯಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದರು. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.
ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆಯಲ್ಲಿ ಚೈತನ್ಯ ಬಘೇಲ್ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಹೀಗಾಗಿ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳಿಗೆ ಪುರಾವೆಗಳು ದೊರೆತಿದ್ದು, ಚೈತನ್ಯ ಬಘೇಲ್ ವಶಕ್ಕೆ ಪಡೆದಿದ್ದಾರೆ.
ಬಾಘೇಲ್ ಮನೆ ಎದುರು ಸಾಕಷ್ಟು ಸಂಖ್ಯೆಯಲ್ಲಿ ಪಕ್ಷದ ಬೆಂಬಲಿಗರು, ಅಭಿಮಾನಿಗಳು ಜಮಾಯಿಸಿದ್ದು, ಪೊಲೀಸರು ಸೂಕ್ತ ಭದ್ರತೆಯನ್ನು ನೀಡಿದ್ದಾರೆ. ಸದ್ಯ ಚೈತನ್ಯರನ್ನು ಇಡಿ ತಂಡ ಬಂಧಿಸಿದ್ದು, ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದೆ. ಇನ್ನೊಂದೆಡೆ, ನ್ಯಾಯಾಲಯದ ಬಳಿಯೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಪೊಲೀಸರು ನ್ಯಾಯಾಲಯದ ಭದ್ರತೆಯನ್ನು ಕೂಡ ಹೆಚ್ಚಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಭೂಪೇಶ್ ಬಘೇಲ್, “ಇಂದು ನನ್ನ ಮಗನ ಜನ್ಮದಿನ, ಈ ದಿನದಂದೇ ಅವನನ್ನು ಬಂಧಿಸಲಾಗಿದೆ. ಮೊದಲು ಅವರು ಕವಾಸಿ ಲಖ್ಮಾ ಅವರನ್ನು, ನಂತರ ದೇವೇಂದ್ರ ಯಾದವ್ ಅವರನ್ನು ಗುರಿಯಾಗಿಸಿಕೊಂಡರು. ಈಗ ಯಾರೂ ಕೂಡ ಅದಾನಿ ವಿರುದ್ಧ ಧ್ವನಿ ಎತ್ತದಂತೆ ನನ್ನ ಮಗನನ್ನು ಗುರಿಯಾಗಿಸಿಕೊಂಡಿದ್ದಾರೆ. ನಾವು ಇದಕ್ಕೆಲ್ಲ ಹೆದರುವುದಿಲ್ಲ” ಎಂದಿದ್ದಾರೆ.
“ಮೋದಿ ಮತ್ತು ಶಾ ಜಿ ನೀಡುವ ಹುಟ್ಟುಹಬ್ಬದ ಉಡುಗೊರೆಗಳನ್ನು ಜಗತ್ತಿನ ಯಾವುದೇ ಪ್ರಜಾಪ್ರಭುತ್ವದಲ್ಲಿ ಯಾರೂ ನೀಡಲು ಸಾಧ್ಯವಿಲ್ಲ. ನನ್ನ ಹುಟ್ಟುಹಬ್ಬದಂದು, ಅತ್ಯಂತ ಗೌರವಾನ್ವಿತ ನಾಯಕರು ಇಬ್ಬರೂ ನನ್ನ ಸಲಹೆಗಾರ ಮತ್ತು ಇಬ್ಬರು OSD ಗಳ ಮನೆಗಳಿಗೆ ED ಯನ್ನು ಕಳುಹಿಸಿದರು. ಮತ್ತು ಈಗ ನನ್ನ ಮಗ ಚೈತನ್ಯನ ಹುಟ್ಟುಹಬ್ಬದಂದು, ED ತಂಡವು ನನ್ನ ಮನೆ ಮೇಲೆ ದಾಳಿ ನಡೆಸುತ್ತಿದೆ. ಈ ಉಡುಗೊರೆಗಳಿಗೆ ಧನ್ಯವಾದಗಳು. ನಾನು ಅವರನ್ನು ನನ್ನ ಜೀವ ಇರುವವರೆಗೂ ನೆನಪಿಸಿಕೊಳ್ಳುತ್ತೇನೆ” ಎಂದಿದ್ದಾರೆ.