ಲಕ್ನೋ: ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ಆರೋಪಿ ಹರ್ಷವರ್ಧನ್ ಜೈನ್ ತನಿಖೆ ವೇಳೆ ಸತ್ಯಗಳು ಒಂದೊಂದಾಗಿ ಹೊರ ಬರುತ್ತಿದ್ದು, ಆ ಸತ್ಯ ಸಂಗತಿಗಳನ್ನು ಕೇಳಿ ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಕಳೆದ 8 ವರ್ಷಗಳಿಂದಲೂ ಪಶ್ಚಿಮ ಆರ್ಕ್ಟಿಕಾ, ಸಬ್ರೋಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ರಾಷ್ಟ್ರಗಳ ರಾಯಭಾರಿ ಕಚೇರಿ ಎಂದು ವಂಚನೆ ಮಾಡುತ್ತಿದ್ದ ವ್ಯಕ್ತಿಯ ಬಗ್ಗೆ ಸ್ಫೋಟಕ ರಹಸ್ಯಗಳನ್ನು ಅಧಿಕಾರಿಗಳು ಅನಾವರಣಗೊಳಿಸಿದ್ದಾರೆ.
ನಕಲಿ ರಾಯಭಾರ ಕಚೇರಿಯಲ್ಲಿ ನೂರಾರು ಕೋಟಿಗಳ ಮೊತ್ತದ ಹಗರಣ ನಡೆದಿದೆ. ಬಹು ವಿದೇಶಿ ಬ್ಯಾಂಕ್ ಖಾತೆಗಳು ನಕಲಿ ರಾಯಭಾರ ಕಚೇರಿಗೆ ಲಿಂಕ್ ಇರುವುದು ಕೂಡ ಪತ್ತೆಯಾಗಿದೆ. ಅಲ್ಲದೇ ಆರೋಪಿ ಹರ್ಷವರ್ಧನ್ 160ಕ್ಕೂ ಹೆಚ್ಚು ಬಾರಿ ವಿದೇಶಿ ಪ್ರಯಾಣ ಮಾಡಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅಂತಾರಾಷ್ಟ್ರೀಯ ವಂಚಕ ಸಯೀದ್ ಮತ್ತು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ವಿವಾದಿತ ದೇವಮಾನವ ಚಂದ್ರಸ್ವಾಮಿ ಎಂಬಾತ ಹರ್ಷವರ್ಧನ್‌ನನ್ನು ಪರಿಚಯಿಸಿದ್ದಾನೆ. ಅಲ್ಲಿಂದ ಶುರುವಾದ ಇವರ ಗೆಳೆತನ ನಂತರ ಸಯೀದ್ ಜತೆ ಸೇರಿ 25 ನಕಲಿ ಕಂಪನಿಗಳನ್ನು ತೆರೆಯುವವರೆ ಬಂದಿದೆ. ಈ ಕಂಪನಿಗಳಿಂದ ಸುಮಾರು 300 ಕೋಟಿ ರೂ ಹಗರಣ ನಡೆಸಿರುವುದಾಗಿ ತಿಳಿದು ಬಂದಿದೆ.
ಬಾಡಿಗೆ ಮನೆಯೊಂದರಲ್ಲಿ ಅಸ್ತಿತ್ವದಲ್ಲೇ ಇಲ್ಲದ ಪಶ್ಚಿಮ ಆರ್ಕ್ಟಿಕಾ, ಸಬೋರ್ಗಾ, ಪೊಲಿವಿಯಾ ಮತ್ತು ಲೊಡೊನಿಯಾ ಎಂಬ ದೇಶಗಳ ಹೆಸರಲ್ಲಿ ರಾಯಭಾರ ಕಚೇರಿಯನ್ನು ಆರೋಪಿ ಹರ್ಷವರ್ಧನ್ ನಡೆಸುತ್ತಿದ್ದ. ವಾಹನಗಳಿಗೆ ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಅಂಟಿಸಿಕೊಂಡು ಓಡಾಡುತ್ತಿದ್ದ.
ಜನರ ದಾರಿ ತಪ್ಪಿಸಲು ಆತ ಪ್ರಧಾನಿ, ರಾಷ್ಟ್ರಪತಿ ಮತ್ತು ಇತರ ಗಣ್ಯರೊಂದಿಗೆ ಇರುವಂತೆ ತೋರಿಸಿಕೊಳ್ಳಲು ಎಡಿಟ್ ಮಾಡಿದ ಫೋಟೋಗಳನ್ನು ಸಹ ಬಳಸಿದ್ದಾನೆ. ಜೈನ್ ವಿದೇಶಗಳಲ್ಲಿ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ಉದ್ಯೋಗ ನೀಡುವುದಾಗಿ ಸುಳ್ಳು ಭರವಸೆ ನೀಡುವ ಮೂಲಕ ದಲ್ಲಾಳಿ ವ್ಯವಹಾರಗಳಲ್ಲಿ ತೊಡಗಿದ್ದ ಎಂಬ ದೂರು ಇದೆ.
ಹಲವು ದೇಶಗಳ ಅಂಚೆ ಚೀಟಿಗಳಿಂದ ಹಿಡಿದು ಪ್ರಧಾನ ಮಂತ್ರಿಗಳು ಮತ್ತು ಅಧ್ಯಕ್ಷರ ಜೊತೆಗಿನ ನಕಲಿ ಫೋಟೋಗಳು ಮತ್ತು ಮೈಕ್ರೋನೇಷನ್‌ಗಳ ನಕಲಿ ಪಾಸ್‌ಪೋರ್ಟ್‌ಗಳ ತನಕ ನಕಲಿ ದಾಖಲೆಗಳು ಆರೋಪಿ ಮನೆಯಲ್ಲಿ ಸಿಕ್ಕಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹಲವು ಕಂಪನಿಗಳ ಮೂಲಕ ಹವಾಲಾ ದಂಧೆ ನಡೆಸುವಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು ಈ ಮುಂಚೆ ಜೈನ್ ವಿರುದ್ಧ 2011ರಲ್ಲಿ ಅಕ್ರಮ ಸ್ಯಾಟಲೈಟ್ ಫೋನ್ ವಶಪಡಿಸಿಕೊಂಡ ಪ್ರಕರಣ ದಾಖಲಾಗಿತ್ತು. ಕವಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ವಶಪಡಿಸಿಕೊಂಡ ವಸ್ತುಗಳು: 44.7 ಲಕ್ಷ ರೂ. ನಗದು, ವಿದೇಶಿ ಕರೆನ್ಸಿ, ವಿದೇಶಾಂಗ ಸಚಿವಾಲಯದ ಮುದ್ರೆಯೊಂದಿಗೆ ನಕಲಿ ದಾಖಲೆಗಳು, ರಾಜತಾಂತ್ರಿಕ ನಂಬರ್ ಪ್ಲೇಟ್ ಹೊಂದಿರುವ ನಾಲ್ಕು ಕಾರ್‌ಗಳು, 12 ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳು, ವಿವಿಧ ದೇಶಗಳು ಮತ್ತು ಕಂಪನಿಗಳ ಮೂವತ್ನಾಲ್ಕು ಸೀಲುಗಳು, ಎರಡು ನಕಲಿ ಪ್ರೆಸ್ ಕಾರ್ಡ್‌ಗಳು, ನಕಲಿ ಪ್ಯಾನ್ ಕಾರ್ಡ್‌ಗಳು ಸೇರಿದಂತೆ ವಿವಿಧ ಕಂಪನಿಗಳ ದಾಖಲೆಗಳು ಪತ್ತೆಯಾಗಿದ್ದು ತನಿಖೆ ಮುಂದುವರಿದಿದೆ.