ಧರ್ಮಸ್ಥಳ ಪ್ರಕರಣ: ಅನಾಮಿಕ ವ್ಯಕ್ತಿ ಜತೆ ಎಸ್‌ಐಟಿ ಸ್ಥಳ ಮಹಜರು

1
66

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಿರುವೆ ಎಂದು ಅನಾಮಿಕ ದೂರುದಾರ ಹೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷಾ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳ ಮುಂದೆ ಹಾಜರಾಗಿರುವ ಸಾಕ್ಷಿ ವ್ಯಕ್ತಿ ಜತೆಗೆ ಎಸ್‌ಐಟಿ ಅಧಿಕಾರಿಗಳು ಇಂದು ಸ್ಥಳ ಮಹಜರು ನಡೆಸಿದ್ದಾರೆ.

ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಅನುಚೇತ್, ಮತ್ತು ಎಸ್ಪಿ ಸಿ.ಎ. ಸೈಮನ್ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಮುಂಜಾನೆಯೇ ಆಗಮಿಸಿದ್ದರು. ದೂರುದಾರ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗಿದ್ದಾನೆ. ಕೆಲವು ತಾಸು ಮಾತುಕತೆ ನಡೆಸಿದ ಬಳಿಕ ದಾಖಲೆ ಪಡೆದು ದೂರುದಾರನ ಸಹಿ ಹಾಕಿ ಬಳಿಕ ಬಿಗಿ ಭದ್ರತೆಯಲ್ಲಿ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿ ಆಗಮಿಸಿದರು.

ಸ್ನಾನಘಟ್ಟದ ಸಮೀಪವೇ ಒಂದು ಸ್ಥಳವನ್ನು ಆತ ತೋರಿಸಿದ್ದು ಅದನ್ನು ಗುರುತಿಸಿದ ಬಳಿಕ ದಟ್ಟ ಅರಣ್ಯದಲ್ಲಿ ಸುಮಾರು ಒಂದು ಗಂಟೆಯಿಂದ ಪರಿಶೀಲನೆ ಕಾರ್ಯ ನಡೆದಿದೆ.

ಈ ಕಾಡಿನ ಒಳಗೆ ಆತ ಹಲವಾರು ಮೃತದೇಹಗಳನ್ನು ಹೂತು ಹಾಕಿರುವ ಅನುಮಾನವಿದ್ದು, ಇಲ್ಲಿ ಅಧಿಕಾರಿಗಳು ಅದನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿನ ಸ್ಥಳ ಪರಿಶೀಲನೆ ಮತ್ತೆ ಮುಂದುವರಿಯುವ ನಿರೀಕ್ಷೆಯಿದೆ.

ಈತ ಸೋಮವಾರ(ಇಂದು) ನೀಡುವ ಮಾಹಿತಿ ಹಾಗೂ ಗುರುತಿಸುವ ಸ್ಥಳಗಳನ್ನು ಪೊಲೀಸರು ಮಾರ್ಕ್ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಆರಂಭದ ಹಂತದಲ್ಲಿ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು ಮುಂದಿನ ಹಂತದಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಕ್ಕೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಅರಣ್ಯ ಇಲಾಖೆಯ ಜಾಗಕ್ಕೆ ಸೇರಿದ ಸ್ಥಳದಲ್ಲಿ ತಲೆ ಬರುಡೆ ಅಗೆದಿರುವ ಮಾಹಿತಿಯಿದ್ದು, ಅದೇ ಜಾಗದಲ್ಲಿ ಮಹಜರು ನಡೆಸಲಾಯಿತು. ಕಂದಾಯ ಇಲಾಖೆ, ಸರ್ವೇ ಇಲಾಖೆ, ಐ.ಎಸ್.ಡಿ. (ಅಂತರಿಕ ಭದ್ರತಾ ವಿಭಾಗ), ಎಫ್.ಎಸ್.ಎಲ್. ವಿಭಾಗದ ಸೋಕೋ ಸಿಬ್ಬಂದಿ, ಅರಣ್ಯ ಇಲಾಖೆ ತಂಡ ಜತೆಗೆ ಸಹಕರಿಸಿದೆ.

ಮೊಹಾಂತಿ ನೇಮಕ ರದ್ಧತಿಗೆ ಆಗ್ರಹ: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಕೊಲೆ ಆರೋಪಗಳ ತನಿಖೆಗೆ ಸರಕಾರ ಪ್ರಣಬ್ ಮೊಹಾಂತಿಯವರ ನೇಮಕವನ್ನು ರದ್ದುಗೊಳಿಸಿ ಡಾ.ಕೆ. ರಾಮಚಂದ್ರ ರಾವ್ ಅಥವಾ ದಯಾನಂದ ಅವರನ್ನು ಈ ಕೂಡಲೆ ಈ ತನಿಖಾ ತಂಡದ ಉಸ್ತುವಾರಿಯಾಗಿ ನೇಮಕ ಮಾಡಬೇಕು ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆಗ್ರಹಿಸಿದ್ದಾರೆ.

ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅತ್ಯಾಚಾರ ಮತ್ತು ನರಹತ್ಯೆ ಕುರಿತಾದ ತನಿಖೆಗೆ ಇವರು ಸೂಕ್ತ ವ್ಯಕ್ತಿಯಲ್ಲ ಎಂದು ಪೊಲೀಸರೇ ಹೇಳುತ್ತಿದ್ದಾರೆ. ಈ ಎಸ್‌ಐಟಿ ತಂಡದಲ್ಲಿ ಒಟ್ಟು 20 ಕೆಎಸ್‌ಪಿ ಅಧಿಕಾರಿಗಳು ಮತ್ತು 4 ಐಪಿಎಸ್ ಅಧಿಕಾರಿಗಳಿದ್ದಾರೆ. ಅನುಚೇತ್ ಎಂ.ಎನ್. ಮತ್ತು ಡಾ. ಸೌಮ್ಯಲತರವರು ಕನ್ನಡಿಗರು. ಉಳಿದ 20 ಕೆಎಎಸ್‌ಪಿ ಅಧಿಕಾರಿಗಳೂ ಸಹ ಕನ್ನಡಿಗರು. ಈ ಕನ್ನಡಿಗ ಅಧಿಕಾರಿಗಳ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಈಗ ಚರ್ಚೆಯಾಗುತ್ತಿದೆ ಎಂದಿದ್ದಾರೆ.

Previous articleFIDE Women’s Chess World Cup: ವಿಶ್ವಚಾಂಪಿಯನ್ ಆದ ದಿವ್ಯಾ ದೇಶಮುಖ್‌
Next articleಏಳು ದಿನಗಳ ನಿರಂತರ ಭರತನಾಟ್ಯ ಪ್ರದರ್ಶನ: ರೆಮೋನಾ ಪಿರೇರಾ ವಿಶ್ವ ದಾಖಲೆ

1 COMMENT

LEAVE A REPLY

Please enter your comment!
Please enter your name here