ವಾಲ್ಮೀಕಿ ನಿಗಮ ಹೋಲುವ ಮತ್ತೊಂದು ಕೇಸ್: 72 ಕೋಟಿ ರೂ. ಹಗರಣ

0
111

ಬಳ್ಳಾರಿ: ರಾಜ್ಯ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ ಮಾದರಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಕೊಪ್ಪಳ ವಿಭಾಗದಲ್ಲಿನ 72 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಹಾಲಿ ದಾವಣಗೆರೆಯಲ್ಲಿ ಇಇ ಆಗಿ ಕೆಲಸ ನಿರ್ವಹಿಸುತ್ತಿರುವ ಝಡ್‌.ಎಂ. ಚಿಂಚೋಳಿಕರ್, ಕೆಲಸದಿಂದ ವಜಾಗೊಂಡ ಹೊರಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಮೇಲೆ ಕೊಪ್ಪಳ ಲೋಕಾಯುಕ್ತ ಕಚೇರಿಯಲ್ಲಿ ಶನಿವಾರ ದೂರು ಸಲ್ಲಿಕೆಯಾಯಿತು. ಕೆಆರ್‌ಐಡಿಎಲ್ ಎಂಡಿ ಬಸವರಾಜ ನಿರ್ದೇಶನದ ಮೇರೆಗೆ ಕೊಪ್ಪಳ ವಿಭಾಗದ ಇಇ ಅನಿಲ್‌ ಪಾಟೀಲ್, ನೆಲೋಗಿಪುರ ಉಪವಿಭಾಗದ ಆನಂದ ಕಾರ್ಲಕುಂಟಿ ಖುದ್ದಾಗಿ ಕೊಪ್ಪಳದ ಲೋಕಾಯುಕ್ತ ಕಚೇರಿಗೆ ತೆರಳಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಿದರು.

ಝಡ್.ಎಂ. ಚಿಂಚೋಳಿಕರ್ ಈ ಹಿಂದೆ ಕೊಪ್ಪಳ ವಿಭಾಗದಲ್ಲಿ ಇಇ, ನೆಲೋಗಿಪುರ ಉಪವಿಭಾಗದಲ್ಲಿ ಎಇಇ ಆಗಿ ಕೆಲಸ ನಿರ್ವಹಿಸುತ್ತಿದ್ದ 2023-24, 2024-25 ಅವಧಿಯಲ್ಲಿ ಸುಮಾರು 96ಕ್ಕೂ ಹೆಚ್ಚು ಕಾಮಗಾರಿಗಳ ಹೆಸರಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ ಹಣ ಎತ್ತುವಳಿ ಮಾಡಿದ್ದರು.

ಇದೇ ಅವಧಿಯಲ್ಲಿ ಹೊರಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆಗಿನ ಜಿಪಂ ಸಿಇಒ ಅವರ ಫೋರ್ಜರಿ ಸಹಿ ಮಾಡಿ ಸುಳ್ಳು ಕಾಮಗಾರಿ ಕ್ರೀಯಾ ಯೋಜನೆ ರೂಪಿಸಿಕೊಂಡು ಹಣ ಡ್ರಾ ಮಾಡಿಕೊಂಡಿದ್ದರು. ನಿಗಮಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಅಪರಾ ತಪರಾ ಎಸಗಿ ಕೋಟ್ಯಂತರ ರೂ. ಹಣವನ್ನು ಸ್ವಂತ ಖಾತೆಗೆ ಡ್ರಾ ಮಾಡಿಕೊಂಡಿದ್ದರು.

ಈ ಬಗ್ಗೆ ಕೆಆರ್‌ಐಡಿಎಲ್ ಆಂತರಿಕಾ ತನಿಖಾ ಸಮಿತಿ ಮೂರು ತಿಂಗಳ ಹಿಂದೆ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆರಂಭದಲ್ಲಿ 62 ಕೋಟಿ ರೂ. ನಷ್ಟಿದ್ದ ಹಗರಣ, ಬಗೆದೆಂತೆಲ್ಲ ವಿಸ್ತಾರವಾಯಿತು. ಎಲ್ಲ ಮೂಲಗಳಿಂದ ಒಟ್ಟು 72 ಕೋಟಿ 71 ಲಕ್ಷ 54 ಸಾವಿರ ರೂ. ದುರ್ಬಳಕೆ ಸಾಬೀತಾಗಿದ್ದು, ಈ ಹಣ ದುರ್ಬಳಕೆಗೆ ಕಾರಣರಾದ ಝಡ್‌.ಎಂ. ಚಿಂಚೋಳಿಕರ್, ಕಳಕಪ್ಪ ನಿಡಗುಂದಿ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.

ಸರಕಾರಕ್ಕೆ ಮುಜುಗರ: ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಇಂತಹದ್ದೆ ಭ್ರಷ್ಟಾಚಾರ ಬಯಲಾಗಿತ್ತು. ಇದು ಸರಕಾರಕ್ಕೆ ಮುಜುಗರ ತಂದಿದ್ದ ಪರಿಣಾಮ ಪರಿಶಿಷ್ಟ ವರ್ಗ ಕಲ್ಯಾಣ ಖಾತೆ ಸಚಿವರಾಗಿದ್ದ ಬಿ. ನಾಗೇಂದ್ರ ರಾಜೀನಾಮೆ ಸಲ್ಲಿಸಬೇಕಾಯಿತು. ಈ ಪ್ರಕರಣವೂ ಅಂತಹದ್ದೆ ತಲೆದಂಡಕ್ಕೆ ಕಾರಣವಾಗುತ್ತದೆ ಎನ್ನುವ ಅನುಮಾನ ಇತ್ತೀಚೆಗೆ ಶುರುವಾಗಿತ್ತು.

ಸ್ವತಃ ಕೆಆರ್‌ಐಡಿಎಲ್ ನಿಗಮದ ಅಧ್ಯಕ್ಷ ಬಿ.ಕೆ. ಸಂಗಮೇಶ ಭ್ರಷ್ಟಾಚಾರ ಎಸಗಿದ ಅಧಿಕಾರಿಗಳ ಬೆನ್ನಿಗೆ ನಿಂತಿದ್ದರೆ ಎನ್ನುವ ಶಂಕೆ ಬಲವಾಗಿದ್ದವು. ಅಲ್ಲದೇ ಬಹುಕೋಟಿ ಹಗರಣದ ಮೊದಲ ಆರೋಪಿ ಆಗಿರುವ ಝಡ್.ಎಂ. ಚಿಂಚೋಳಿಕರ್ ಅವರಿಗೆ ಸಂಗಮೇಶ ಅವರೇ ಸ್ವತಃ ಪೋಸ್ಟಿಂಗ್ ಕೊಡಿಸಿದ್ದು ಇದಕ್ಕೆ ಪುಷ್ಟಿ ನೀಡಿತ್ತು. ಒಟ್ಟಾರೇ ಇದುವರೆಗೂ ಹಲವು ಪ್ರಭಾವದಿಂದ ತಡೆಹಿಡಿದಿದ್ದ ಭ್ರಷ್ಟಾಚಾರ ಪ್ರಕರಣ ಲೋಕಾಯುಕ್ತ ಅಂಗಳ ಪ್ರವೇಶಿಸಿದ್ದು, ಏನಾಗಲಿದೆಯೋ ಕಾದು ನೋಡಬೇಕಿದೆ.

ಹಗರಣ ಬಿಚ್ಚಿಟ್ಟಿದ್ದ ‘ಸಂಕ’: ಕೊಪ್ಪಳ ಕೆಆರ್‌ಐಡಿಎಲ್‌ನಲ್ಲಿ ನಡೆದಿದ್ದ ಈ ಬಹುಕೋಟಿ ಹಗಣದ ಹೂರಣ ಬಯಲಿಗೆಳೆದ ‘ಸಂಯುಕ್ತ ಕರ್ನಾಟಕ’ ಸರಣಿ ವರದಿ ಪ್ರಕಟಿಸಿ, ಸರಕಾರದ ಗಮನ ಸೆಳೆದಿತ್ತು. ಎ. 12ರಂದು ‘ಕೊಪ್ಪಳ ಕೆಆರ್‌ಐಡಿಎಲ್: 62 ಕೋಟಿ ಗೋಲ್ಮಾಲ್’, ಎ. 22ರಂದು ‘ಕೊಪ್ಪಳ ಕೆಆರ್‌ಐಡಿಎಲ್ ಹಗರಣ: ತನಿಖೆ ಶುರು’, ಮತ್ತು ಮೇ 29, ಜು. 12 ಸೇರಿದಂತೆ ಈ ಹಗರಣದ ಕುರಿತು ʼಸಂಯುಕ್ತ ಕರ್ನಾಟಕ’ ಈ ಹಗರಣದ ಕುರಿತು ಸರಣಿ ವರದಿ ಮಾಡಿತ್ತು.

Previous articleಈ ಶಾಲೆ ನೋಡಿ ಹುಬ್ಬೇರಿಸಬೇಡಿ: ಸರ್ಕಾರಿ ಶಾಲೆ ಅಭಿವೃದ್ಧಿಗೆ ವೈದ್ಯರ 14 ಕೋಟಿ ದೇಣಿಗೆ!
Next articleಕುರ್ಚಿ ಅಲ್ಲಾಡಿದಾಗ ಸಿಎಂಗೆ ಸಮಾವೇಶ ನೆನಪಾಗುತ್ತೆ!

LEAVE A REPLY

Please enter your comment!
Please enter your name here