Home ಸುದ್ದಿ ದೇಶ ಉತ್ತರಾಖಂಡದಲ್ಲಿ ಮೇಘಸ್ಫೋಟ: ನಾಲ್ವರು ಸಾವು, ಹಲವರು ನಾಪತ್ತೆ, ಕೊಚ್ಚಿ ಹೋದ ಮನೆಗಳು

ಉತ್ತರಾಖಂಡದಲ್ಲಿ ಮೇಘಸ್ಫೋಟ: ನಾಲ್ವರು ಸಾವು, ಹಲವರು ನಾಪತ್ತೆ, ಕೊಚ್ಚಿ ಹೋದ ಮನೆಗಳು

0

ಉತ್ತರಾಖಂಡ: ಮೇಘಸ್ಫೋಟ ಸಂಭವಿಸಿ ನಾಲ್ವರು ಮೃತಪಟ್ಟು, ಐವತ್ತಕ್ಕೂ ಅಧಿಕ ಜನರು ನಾಪತ್ತೆಯಾದ ಘಟನೆ ಉತ್ತರಕಾಶಿ ಜಿಲ್ಲೆಯ ಹರ್ಸಿಲ್ ಬಳಿಯ ಧರಾಲಿ ಗ್ರಾಮದಲ್ಲಿಂದು ನಡೆದಿದೆ. ಧರಾಲಿ ಗ್ರಾಮದ ಖೀರ್ ಗಂಗಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಈ ಮೇಘಸ್ಫೋಟ ಸಂಭವಿಸಿದೆ.

ಮೇಘಸ್ಫೋಟದಿಂದ ಉಂಟಾದ ಈ ದಿಢೀರ್ ಪ್ರವಾಹದಲ್ಲಿ ಅನೇಕ ಮನೆಗಳು ಕೊಚ್ಚಿ ಹೋಗಿದ್ದು, ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಹಲವಾರು ಜನರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಂತೂ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.

ಭಾರೀ ಮಳೆಯಿಂದಾಗಿ ಗಂಗಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ತುಣುಕುಗಳು ಹರಿದಾಡುತ್ತಿವೆ. ಈ ದೃಶ್ಯಗಳಲ್ಲಿ ಏಕಾಏಕಿ ಮೇಘಸ್ಫೋಟ ಸಂಭವಿಸಿ ನೀರು ಹರಿದು ಬರುತ್ತಿರುವುದು ಜತೆಗೆ ನದಿ ತೀರದಲ್ಲಿರುವ ಮನೆ, ಕಟ್ಟಡಗಳು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ನೋಡಬಹುದು. ಅಲ್ಲದೇ ಇದರಿಂದ ಭಯಗೊಂಡ ಜನರು ಕಿರುಚುತ್ತಿರುವುದು ದೃಶ್ಯದಲ್ಲಿದೆ.

ಈ ಕುರಿತಂತೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ, “ಉತ್ತರಕಾಶಿಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟದಿಂದ ಉಂಟಾದ ಭಾರೀ ನಷ್ಟದ ಸುದ್ದಿ ಅತ್ಯಂತ ದುಃಖಕರ ಮತ್ತು ನೋವಿನಿಂದ ಕೂಡಿದೆ. ಘಟನಾ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಮತ್ತು ಇತರ ಸಂಬಂಧಿತ ತಂಡಗಳು, ಸ್ಥಳೀಯ ಯುವಕರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಯುದ್ಧೋಪಾದಿಯಲ್ಲಿ ತೊಡಗಿಸಿಕೊಂಡಿವೆ. ಈ ನಿಟ್ಟಿನಲ್ಲಿ ನಾನು ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಜತೆಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತಿದ್ದೇನೆ. ಎಲ್ಲರೂ ಸುರಕ್ಷಿತವಾಗಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ” ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ನಲ್ಲಿ ಸೋಮವಾರ ರಾತ್ರಿ ಇಡೀ ಮಳೆಯಾಗಿದೆ. ಅಪಾರ ಮಳೆಯಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಹರಿದ್ವಾರದಲ್ಲಿ ಗಂಗಾ ಮತ್ತು ಕಾಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದಾಗಿ ಉತ್ತರಕಾಶಿ ಪೊಲೀಸರು ನದಿ ತೀರದ ಬಳಿ ತೆರೆಳದಂತೆ ಸೂಚಿಸಿದ್ದಾರೆ.

ಈ ಕುರಿತಂತೆ ಉತ್ತರಕಾಶಿ ಪೊಲೀಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, “ಹರ್ಸಿಲ್ ಬಳಿಯ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಿಂದಾಗಿ ಧರಾಲಿಯಲ್ಲಿ ಹಾನಿಯ ಮಾಹಿತಿಯ ಮೇರೆಗೆ, ಪೊಲೀಸ್, ಎಸ್‌ಡಿಆರ್‌ಎಫ್, ಸೇನೆ ಮುಂತಾದ ವಿಪತ್ತು ತಂಡಗಳು ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬರೂ ನದಿಯಿಂದ ಸರಿಯಾದ ಅಂತರವನ್ನು ಕಾಯ್ದುಕೊಳ್ಳಬೇಕು. ನಿಮ್ಮನ್ನು, ಮಕ್ಕಳನ್ನು ಮತ್ತು ಜಾನುವಾರುಗಳನ್ನು ನದಿಯಿಂದ ಸರಿಯಾದ ದೂರಕ್ಕೆ ಕರೆದೊಯ್ಯಿರಿ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

2013 ರಲ್ಲಿ ಕೇದಾರನಾಥ್ ಕಣಿವೆಯಲ್ಲಿ ಉಂಟಾದ ದಿಢೀರ್‌ ಪ್ರವಾಹದಂತೆ ಉತ್ತರಕಾಶಿ ಜಿಲ್ಲೆಯ ಧರಾಲಿ ಗ್ರಾಮದಲ್ಲಿ ಮೇಘಸ್ಫೋಟ ಆಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮೇಘಸ್ಫೋಟದಿಂದಾಗಿ ಬೆಟ್ಟದ ಮೇಲಿದ್ದ ಮರಗಳ ಸಮೇತ ನೀರು ಹರಿದು ಬಂದಿದೆ. ಇದರಿಂದಾಗಿ ತಗ್ಗು ಪ್ರದೇಶಗಳಲ್ಲಿದ್ದ ಅನೇಕ ಮನೆಗಳು ನೆಲಕ್ಕುರುಳಿದರೆ, ನೀರಿನ ರಭಸಕ್ಕೆ ಹಲವಾರು ಮನೆಗಳು ಕೊಚ್ಚಿ ಹೋಗಿವೆ. ಈ ಪ್ರವಾಹದಲ್ಲಿ ಸಾಕಷ್ಟು ಜನರು ಸಿಲುಕಿದ್ದಾರೆ. ಆದರೆ, ಅವರು ಬದುಕುಳಿದಿರುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version