ಕೇರಳದ U ಆಕಾರದ ತರಗತಿ ಚಿತ್ರ ವೈರಲ್: ಕರ್ನಾಟಕದಲ್ಲಿರುವ ಈ ಮಾದರಿ ಶಾಲೆ ಬಗ್ಗೆ ಗೊತ್ತೇ?

0
68

ಬೆಂಗಳೂರು: ಫಸ್ಟ್‌ ಬೆಂಚ್‌, ಲಾಸ್ಟ್‌ ಬೆಂಚ್‌ ಗೊಂದಲ ಬೇಡ. ಎಲ್ಲಾ ಮಕ್ಕಳು ಸಮಾನವಾಗಿ ಕುಳಿತು ಕಲಿಯುವ ಅವಕಾಶ ನೀಡಲು ಮುಂದಾಗಿ ಎನ್ನುವ U ತರಗತಿಗಳ ಪರಿಕಲ್ಪನೆ ಕುರಿತು ಈಗಾಗಲೇ ಪ್ರಶ್ನೆ ಮೂಡಿದೆ. ಇದಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಹೋರಾಟಗಾರರು ಕೇರಳ ಮಾದರಿಯ ತರಗತಿಗಳನ್ನು ಜಾರಿಗೆ ತರುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಕೇರಳದ ತರಗತಿ ಚಿತ್ರಗಳು ಈಗಾಗಲೇ ವೈರಲ್ ಆಗಿವೆ.

ಆದರೆ, ಕೇರಳದ U ಆಕಾರದ ತರಗತಿಗೂ ಮೊದಲೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ವೃತ್ತಾಕಾರದ ತರಗತಿಗಳನ್ನು ನಡೆಸಲಾಗುತ್ತಿದೆ. ಅದು ಕೂಡ ಮೂರು ದಶಕಗಳ ಹಿಂದೆಯೇ ಆರಂಭವಾಗಿದೆ ಎನ್ನುವುದು ವಿಶೇಷ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗಾಂಧಿನಗರದಲ್ಲಿರುವ ಸ್ನೇಹ ಪ್ರಾಥಮಿಕ ಶಾಲೆಯಲ್ಲಿ 30 ವರ್ಷಗಳ ಹಿಂದಿನಿಂದಲೇ ವೃತ್ತಾಕಾರದ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಚಂದ್ರಶೇಖರ ದಾಮ್ಲೆ ವಿಭಿನ್ನ ಕಲ್ಪನೆಯೊಂದಿಗೆ ಆರಂಭಗೊಂಡ ಸ್ನೇಹ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿ. ಡಾ. ಯು.ಆರ್. ಅನಂತಮೂರ್ತಿ 1996ರಲ್ಲಿ ಉದ್ಘಾಟಿಸಿದ್ದರು.

ಪ್ರಾಧ್ಯಾಪಕರಾಗಿದ್ದ ಡಾ. ಚಂದ್ರಶೇಖರ ದಾಮ್ಲೆ, ಶಿಕ್ಷಣ ಹಣ ಗಳಿಸುವ ಸಾಧನವಾಗಬಾರದು, ಮೂಲಭೂತ ಶಿಕ್ಷಣವು ತುಂಬಾ ಅತ್ಯುತ್ತಮವಾಗಿರಬೇಕು ಎಂಬ ಉದ್ದೇಶವನ್ನು ಹೊಂದಿರುವವರು. ಮಕ್ಕಳಿಗೆ ಬಲವಾದ ನೆಲೆಯನ್ನು ಸೃಷ್ಟಿಸಲು ಮಾತೃಭಾಷೆಯಲ್ಲಿ ಶಿಕ್ಷಣವನ್ನು ಒದಗಿಸುವುದರಿಂದ ತನ್ನದೇ ಆದ ಭಾಷೆಯಲ್ಲಿ ಜ್ಞಾನವನ್ನು ಪಡೆದಾಗ, ಅದು ಹೆಚ್ಚು ಸಾಪೇಕ್ಷವಾಗಿರುತ್ತದೆ ಮತ್ತು ಆದ್ದರಿಂದ ಅದನ್ನು ಗ್ರಹಿಸಲು, ವಿಶ್ಲೇಷಿಸಲು ಮತ್ತು ನಂತರ ಬೇರೆಡೆ ಅನ್ವಯಿಸಲು ಮತ್ತಷ್ಟು ವ್ಯಕ್ತಪಡಿಸಲು ಸುಲಭವಾಗುತ್ತದೆ ಎಂದು ಶಾಲೆ ತೆರೆಯಲು ಮುಂದಾದರು.

ಡಾ.ಚಂದ್ರಶೇಖರ ದಾಮ್ಲೆ ಹೇಳಿದ್ದೇನು?: ಈ ವಿಭಿನ್ನ ಪ್ರಯೋಗಕ್ಕೆ ಮುಂದಾದ ದಾಮ್ಲೆ, ಅಂದಿನಿಂದ ಇಂದಿನವರೆಗೆ ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ. ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ದಾರಿ ತೋರಿಸಿದ್ದಾರೆ.

U ತರಗತಿಯ ಚರ್ಚೆ ಮುನ್ನಲೆಗೆ ಬಂದಿದ್ದು, ಡಾ. ಚಂದ್ರಶೇಖರ ದಾಮ್ಲೆ ತಮ್ಮ ಶಾಲೆಯಲ್ಲಿ ಪ್ರಯೋಗ ಮಾಡಿರುವ ವೃತ್ತಾಕಾರದ ತರಗತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುವೊಂದನ್ನು ಹಾಕಿದ್ದಾರೆ. ‘ವೃತ್ತಾಕಾರದಲ್ಲಿ ತರಗತಿಗಳು ಕರ್ನಾಟಕದಲ್ಲಿ ಮೊದಲು ಸ್ನೇಹ ಶಾಲೆಗೆ ಮೂರು ದಶಕಗಳ ಅನುಭವ’ ಎಂಬ ಶೀರ್ಷಿಕೆಯನ್ನು ಇದು ಒಳಗೊಂಡಿದೆ.

ಆಂಗ್ಲ ಮಾಧ್ಯಮದ ಪ್ರವಾಹದ ಎದುರು ಕನ್ನಡ ಮಾಧ್ಯಮದ ಖಾಸಗಿ ಶಾಲೆಯನ್ನು 1996 ರಲ್ಲಿ ತೆರೆದಾಗ ಅದು ವಿಶಿಷ್ಟವಾಗಿ ಇರಬೇಕೆಂದು ವೃತ್ತಾಕಾರದ ಕಟ್ಟಡಗಳನ್ನು ಕಟ್ಟಿದೆವು. ಅವುಗಳ ಒಳಗೆ ಮಕ್ಕಳನ್ನು ವೃತ್ತಾಕಾರದಲ್ಲೇ ಕೂರಿಸಿ ಕಳೆದ 29 ವರ್ಷಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ.

ಒಂದು ತರಗತಿಗೆ 30 ಮಕ್ಕಳಿಗೆ ಮಾತ್ರ ಪ್ರವೇಶ ನೀಡುವ ನೀತಿ ಇದ್ದು, ಇಪ್ಪತ್ತು ಅಡಿಗಳ ವ್ಯಾಸದ ಈ ಕೊಠಡಿಗಳಲ್ಲಿ ಒಂದೇ ವೃತ್ತದಲ್ಲಿ ಗೋಡೆಯ ಪರಿಧಿಯಲ್ಲಿ 30 ಮಕ್ಕಳನ್ನು ಕೂರಿಸಲು ಸಾಧ್ಯವಾಗಿದೆ. ಯಾವುದೇ ಕುತ್ತಿಗೆ ನೋವು, ಬೆನ್ನು ನೋವು, ಬೋರ್ಡ್ ಕಾಣದಿರುವುದು ಇತ್ಯಾದಿ ಸಮಸ್ಯೆಗಳು ಈತನಕ ಬಂದಿಲ್ಲ. Back Bencher ಸಮಸ್ಯೆಯನ್ನು ನೀಗಿಸಿದ್ದಲ್ಲದೆ, ಹಲವು ಪ್ರಯೋಜನವಾಗಿದೆ ಎಂದು ಪಟ್ಟಿ ಮಾಡಿದ್ದಾರೆ.

  1. ಮಧ್ಯದಲ್ಲಿ ಏನೂ ಅಡಚಣೆ ಇಲ್ಲ ಶಿಕ್ಷಕಿಗೆ ನೇರವಾಗಿ, ಕ್ಷಿಪ್ರವಾಗಿ ಯಾವುದೇ ಮಗುವಿನ ಬಳಿಗೆ ಹೋಗಲು ಮತ್ತು ಕಲಿಕೆಯನ್ನು ಪರಿಶೀಲಿಸಲು ಸಾಧ್ಯ.
  2. ವೃತ್ತಾಕಾರದಲ್ಲಿ ಕುಳಿತ ಮಕ್ಕಳು ಪರಸ್ಪರ ಮುಖಮುಖಿಯಾಗಿರುವುದರಿಂದ ಅವರಿಗೆ ಸಭಾ ಕಂಪನವು ಈ ಹಂತದಲ್ಲೇ ಮಾಯವಾಗುತ್ತದೆ.
  3. ವೃತ್ತದ ಮಧ್ಯದಲ್ಲಿರುವ ಖಾಲಿ ಜಾಗವು ಮಕ್ಕಳ ಹಾಡು, ನೃತ್ಯ ಮತ್ತು ನಾಟಕಗಳ ಚಟುವಟಿಕೆಗಳಿಗೆ ಉಪಯುಕ್ತವಾಗುತ್ತದೆ.
  4. ಗೋಡೆಯು ನಿಮ್ನ ಆಕಾರದಲ್ಲಿದ್ದು ಕರಿಹಲಗೆಯನ್ನು ಗೋಡೆಯಲ್ಲೇ ಮಾಡಿರುವುದರಿಂದ ಅದರಲ್ಲಿ ಬರೆದುದೆಲ್ಲವೂ ಮಕ್ಕಳಿಗೆ ಕಾಣುತ್ತದೆ. ಎಲ್ಲೇ ಕುಳಿತ ಮಗುವಿಗೆ ಬೋರ್ಡಿನ ಯಾವುದೇ ಮೂಲೆಯಲ್ಲಿ ಬರೆದದ್ದು ಕಾಣಿಸುತ್ತದೆ.
  5. ಮಕ್ಕಳಿಗೂ ಬರೆಯುವ ಅವಕಾಶ ನೀಡುವ ಉದ್ದೇಶದಿಂದ ಕರಿಹಲಗೆಯನ್ನು ತಗ್ಗಿನಲ್ಲಿ ನಿರ್ಮಿಸಲಾಗಿದೆ.
  6. ಸಾಕಷ್ಟು ಕಿಟಕಿಗಳಿರುವುದರಿಂದ ವಾತಾಯನ ವ್ಯವಸ್ಥೆ ಸುಖದಾಯಕವಾಗಿದೆ. ಮಾಡು ಸುಮಾರು 18 ಅಡಿಗಳಷ್ಟು ಎತ್ತರವಿದ್ದು ಬಿಸಿಗಾಳಿ ಮೇಲಕ್ಕೆ ಸಾಗಿ ತರಗತಿಯಲ್ಲಿ ಮಕ್ಕಳು ಇಡೀ ದಿನ ಉಲ್ಲಾಸದಿಂದ ಇರುತ್ತಾರೆ.
  7. ವೃತ್ತಾಕಾರದ ಕೊಠಡಿ ಎಂಬುದರಲ್ಲಿ ಸೌಂದರ್ಯ ಮತ್ತು ಉತ್ಸಾಹದ ಪ್ರೇರಣೆ ಇದೆ.
  8. ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು 1990ರ ದಶಕದ ಕೊನೆಗೆ ʻಚೈತನ್ಯʼ ಎಂಬ ಹೆಸರಿನಲ್ಲಿ ವೃತ್ತಾಕಾರದ ತರಗತಿಗಳನ್ನು ಅನುಮೋದಿಸಿತ್ತು. ಇದರ ಭಾಗವಾಗಿ 1999ರಲ್ಲಿ ಸುಳ್ಯದ ಸ್ನೇಹ ಶಾಲೆಯಲ್ಲಿ ಕರಾವಳಿ ಶಾಲೆಗಳ ಶಿಕ್ಷಕರಿಗಾಗಿ ಒಂದು ವಾರದ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.
  9. ನಮ್ಮ ಶಾಲೆಯಲ್ಲಿ ಇಂತಹ ಮೂರು ಕೊಠಡಿಗಳಿದ್ದು, ಒಂದರಿಂದ ಮೂರನೆಯವರೆಗಿನ ತರಗತಿಗಳು ಅಲ್ಲಿ ನಡೆಯುತ್ತವೆ.
  10. ಪ್ರಸ್ತುತ U ಮಾದರಿಯ ತರಗತಿಗಳ ಫೋಟೋಗಳನ್ನು ಹಾಕಿ ಇದು ಕೇರಳ ಮಾದರಿ ಎಂದು ಪ್ರಚಾರ ಪಡೆಯುತ್ತಿರುವ ಹಾಗೂ ಅಂತಹ ಶಾಲೆಗಳನ್ನು ನಿರ್ಮಿಸಬೇಕೆಂಬ ಒತ್ತಾಯ ಕೇಳಿಬರುತ್ತಿರುವ ಇಂದಿಗಿಂತ ಮೂರು ದಶಕಗಳ ಹಿಂದೆ ಸುಳ್ಯದ ಪ್ರಕೃತಿ ಸಂಪದ್ಭರಿತ ಸ್ನೇಹ ಶಾಲೆಯಲ್ಲಿ ಈ ಮಾದರಿಯನ್ನು ಅಳವಡಿಸಿ ಪ್ರಯೋಜನ ಪಡೆದಿದ್ದೇವೆ. ಆಸಕ್ತರು ಯಾವಾಗ ಬೇಕಿದ್ದರೂ ಬಂದು ಈ ಮಾದರಿಯನ್ನು ನೋಡಬಹುದು. ನಮ್ಮ ವೆಬ್‌ಸೈಟ್ www.snehaschool.in ಎಂದು ಮಾಹಿತಿ ಕೊಟ್ಟಿದ್ದಾರೆ.

Previous articleLinganamakki Dam: ಜೋಗ ಪ್ರವಾಸಿಗರಿಗೆ ಸಿಹಿಸುದ್ದಿ, ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುವ ಸೂಚನೆ
Next articleರಾಹುಲ್ ಗಾಂಧಿ ದೃಢ ನಿಶ್ಚಯದಿಂದ ಭಾರತದಲ್ಲಿ ಜಾತಿ ಗಣತಿ: ಸಿದ್ದರಾಮಯ್ಯ

LEAVE A REPLY

Please enter your comment!
Please enter your name here