Chikmagalur-Tirupati Train: ಚಿಕ್ಕಮಗಳೂರು ತಿರುಪತಿ ರೈಲು, ವೇಳಾಪಟ್ಟಿ, ನಿಲ್ದಾಣಗಳು

ಚಿಕ್ಕಮಗಳೂರು: ಮಲೆನಾಡು ಭಾಗದಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿರುವ ಭಕ್ತರಿಗೆ ಸಿಹಿ ಸುದ್ದಿ ಚಿಕ್ಕಮಗಳೂರು-ತಿರುಪತಿ ವಯಾ ಬೆಂಗಳೂರು ರೈಲು ಸೇವೆಗೆ ಚಾಲನೆ ಸಿಕ್ಕಿದೆ. ರೈಲು ಮಾರ್ಗ ವೇಳಾಪಟ್ಟಿಯನ್ನು ಭಕ್ತರ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ.

ಶುಕ್ರವಾರ ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಚಿಕ್ಕಮಗಳೂರು – ತಿರುಪತಿ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ರೈಲು ಸಾಪ್ತಾಹಿಕವಾಗಿ ಸಂಚಾರ ನಡೆಸಲಿದೆ.

ರೈಲು ವೇಳಾಪಟ್ಟಿ, ನಿಲ್ದಾಣಗಳು: ರೈಲ್ವೆ ಇಲಾಖೆಯ ಮಾಹಿತಿ ಪ್ರಕಾರ ಈ ರೈಲು (17423) ಚಿಕ್ಕಮಗಳೂರು ರೈಲ್ವೆ ನಿಲ್ದಾಣದಿಂದ ಪ್ರತಿ ಗುರುವಾರ ರಾತ್ರಿ 9:00 ಗಂಟೆಗೆ ತಿರುಪತಿಯಿಂದ ಹೊರಟು, ಶುಕ್ರವಾರ ಬೆಳಿಗ್ಗೆ 10:30ಕ್ಕೆ ಚಿಕ್ಕಮಗಳೂರಿಗೆ ಆಗಮಿಸುತ್ತದೆ. ರೈಲು (17424) ಚಿಕ್ಕಮಗಳೂರು-ತಿರುಪತಿ ಪ್ರತಿ ಶುಕ್ರವಾರ ಸಂಜೆ 5:30ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಶನಿವಾರ ಬೆಳಿಗ್ಗೆ 7:40 ಕ್ಕೆ ತಿರುಪತಿಗೆ ತಲುಪುತ್ತದೆ.

ಚಿಕ್ಕಮಗಳೂರು-ತಿರುಪತಿ ರೈಲು ಮಾರ್ಗ ಮಧ್ಯೆ ಪಕಳ, ಚಿತ್ತೂರು, ಕಟ್ಪಾಡಿ, ಜೋಲಾರಪೇಟೆ, ಕುಪ್ಪಂ, ಬಂಗಾರಪೇಟೆ, ವೈಟ್ ಫೀಲ್ಡ್, ಕೃಷ್ಣರಾಜಪುರಂ, ಎಸ್‌ಎಂವಿಟಿ ಬೆಂಗಳೂರು, ಚಿಕ್ಕಬಾಣಾವರ, ತುಮಕೂರು, ತಿಪಟೂರು, ಅರಸೀಕೆರೆ, ದೇವನೂರು, ಬೀರೂರು, ಕಡೂರು, ಬಿಸಲೇಹಳ್ಳಿ, ಸಖರಾಯಪಟ್ಟಣ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಶಿವಮೊಗ್ಗ-ತಿರುಪತಿ ನಡುವೆ ಈಗಾಗಲೇ ರೈಲು ಸೇವೆ ಇದೆ. ಈಗ ಚಿಕ್ಕಮಗಳೂರು-ತಿರುಪತಿ ರೈಲು ಸೇವೆಯ ಮೂಲಕ ತಿರುಪತಿಗೆ ಸಾಗುವ ಭಕ್ತರಿಗೆ ಅನುಕೂಲವಾಗಲಿದೆ. ಅಲ್ಲದೇ ಈ ರೈಲು ಬೆಂಗಳೂರು ಮೂಲಕ ಸಾಗುವ ಕಾರಣ, ಚಿಕ್ಕಮಗಳೂರು ಮತ್ತು ರಾಜಧಾನಿ ಬೆಂಗಳೂರು ನಡುವೆ ಸಂಪರ್ಕಕ್ಕೆ ಅನುಕೂಲವಾಗಿದೆ.

ಚಿಕ್ಕಮಗಳೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ದೇಶ ವಿದೇಶ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ರೈಲು ಸೇವೆಯ ಮೂಲಕ ಪ್ರವಾಸಿಗರು ಸಂಚಾರವನ್ನು ನಡೆಸಲು ಸಹಾಯಕವಾಗಿದೆ.

ಈ ರೈಲು ಸೇವೆ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಭಕ್ತಿಯ ಭಾವನಾತ್ಮಕ ಸನ್ನಿವೇಶವೊಂದು ಇಂದು ಚಿಕ್ಕಮಗಳೂರು ತಿರುಪತಿ ರೈಲು ಚಾಲನೆ ಕಾರ್ಯಕ್ರಮದಲ್ಲಿ ನಡೆಯಿತು. ತಿರುಪತಿಗೆ ಹೊರಡಲು ಹಸಿರು ನಿಶಾನೆಗಾಗಿ ಕಾಯುತ್ತಿದ್ದ ರೈಲಿನ ಹಳಿಗೆ ಇಳಿದ ಮಹಿಳೆಯೋರ್ವರು ರೈಲಿಗೆ ಮೂರು ಬಾರಿ ನಮಸ್ಕರಿಸಿ ಕಾಣಿಕೆ ಇಟ್ಟು ಭಕ್ತಿಯ ಧಾರೆ ಎರೆದಿದ್ದಾರೆ’ ಎಂದು ಹೇಳಿದ್ದಾರೆ.

‘ಈ ತಾಯಿಯ ಬಗ್ಗೆ ವಿಚಾರಿಸಿದಾಗ, ಈಕೆ ಪ್ರತಿವರ್ಷ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಮಾಡುವ ಚಿಕ್ಕಮಗಳೂರಿನ ಲಕ್ಷ್ಮೀಬಾಯಿ. ಇತರೆ ವಾಹನಗಳಲ್ಲಿ ಪ್ರಯಾಣ ಮಾಡುವ ಈಕೆ ಚಿಕ್ಕಮಗಳೂರಿನಿಂದ ನೇರವಾಗಿ ತಿರುಪತಿಗೆ ರೈಲು ಹೊರಡಿಸಿದ್ದನ್ನು ಕಂಡು ಅತ್ಯಂತ ಭಾವುಕಳಾಗಿ ರೈಲಿಗೆ ನಮಸ್ಕರಿಸಿ ಗೌರವಿಸಿದ್ದಾರೆ’ ಎಂದು ತಿಳಿಸಿದ್ದಾರೆ, ಈ ಕುರಿತು ಚಿತ್ರವನ್ನ ಸಂಸದರು ಹಂಚಿಕೊಂಡಿದ್ದಾರೆ.

‘ನಿಜಕ್ಕೂ ಇದೊಂದು ಭಾವುಕ ಕ್ಷಣ. ಸಾವಿರಾರು ಮಂದಿ ಭಕ್ತರನ್ನು ಹೊತ್ತೊಯ್ಯುವ ಈ ರೈಲಿಗೆ ಭಕ್ತಿಯ ಸ್ಪರ್ಶ ನೀಡಿದ ಲಕ್ಷ್ಮೀಬಾಯಿಯನ್ನು ಕಂಡು ಮೂಕವಿಸ್ಮಿತನಾದೆ. ಒಂದರ್ಥದಲ್ಲಿ ನಮ್ಮ ನಿಯಮಬದ್ಧ ಚಾಲನೆಗೂ ಮೊದಲೇ ಆಕೆ ಭಕ್ತಿಯ ಚಾಲನೆ ನೀಡಿದ್ದರು. ಚಿಕ್ಕಮಗಳೂರು-ಬೆಂಗಳೂರು-ತಿರುಪತಿ ಪ್ರಯಾಣಿಸುವ “ದತ್ತಪೀಠ ಎಕ್ಸ್‌ಪ್ರೆಸ್‌” ರೈಲು ಅಸಂಖ್ಯ ಭಕ್ತಾದಿಗಳಿಗೆ ಭಕ್ತಿಯ ರಥವಾಗಲಿ ಎಂದು ಆಶಿಸುತ್ತೇನೆ’ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.