ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವೇಗದೂತ ಎಕ್ಸ್‌ಪ್ರೆಸ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಸೇವೆಗೆ 23 ಎಸಿ ಮತ್ತು 44 ನಾನ್ ಎಸಿ ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ನಾನ್ ಎಸಿ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಬಿಡದಿ, ಆನೇಕಲ್, ದೊಡ್ಡಬಳ್ಳಾಪುರ, ದಾಬಸ್‌ಪೇಟೆ, ಟಿನ್ ಫ್ಯಾಕ್ಟರಿ, ಹೊಸಕೋಟೆಗೆ ಸಂಚಾರವನ್ನು ನಡೆಸಲಿವೆ. ನಗರದಲ್ಲಿಯೇ ಸೀಮಿತ ನಿಲುಗಡೆಯೊಂದಿಗೆ ದೂರ ಪ್ರಯಾಣಕ್ಕಾಗಿ ‘ವೇಗದೂತ’ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.
ಎಸಿ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ದೊಡ್ಡಬಳ್ಳಾಪುರ, ಹೆಬ್ಬಾಳ, ಸಿಲ್ಕ್ ಬೋರ್ಡ್ ಜಂಕ್ಷನ್‌ಗಳ ನಡುವೆ ಸಂಚಾರವನ್ನು ನಡೆಸುತ್ತದೆ. ಇದೇ ಮೊದಲ ಬಾರಿಗೆ ಬಿಎಂಟಿಸಿ ಇಂತಹ ಬಸ್ ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಿದೆ.
ಕೆಎಸ್ಆರ್‌ಟಿಸಿ ಸೇರಿ ಮೂರು ನಿಗಮದಲ್ಲಿ ಈಗಾಗಲೇ ‘ವೇಗದೂತ’ ಹೆಸರಿನ ಬಸ್ ಸೇವೆ ಇದೆ. ಆದರೆ ನಗರ ಸಾರಿಗೆ ಸೇವೆ ನೀಡುವ ಬಿಎಂಟಿಸಿ ಮೊದಲ ಬಾರಿಗೆ ಇಂತಹ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದೆ.
ಸಾಮಾನ್ಯ ಬಸ್‌ಗಳಲ್ಲಿ ಸಂಚಾರ ನಡೆಸಲು 1,500 ರೂ.ಗಳ ತಿಂಗಳ ಪಾಸ್ ನೀಡಲಾಗುತ್ತದೆ. ಈ ಪಾಸು ಪಡೆದಿರುವ ಪ್ರಯಾಣಿಕರು ಪ್ರತಿ ಟ್ರಿಪ್‌ಗೆ 30 ರೂ. ಮತ್ತು ಟೋಲ್ ದರವಿದ್ದರೆ ಅದನ್ನು ಪಾವತಿಸಿ ವೇಗದೂತ ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.
ನಗರದಲ್ಲಿ ಪ್ರಾಯೋಗಿಕವಾಗಿ ಕೆಲವು ಮಾರ್ಗದಲ್ಲಿ ‘ವೇಗದೂತ’ ಮಾದರಿ ಬಸ್ ಸೇವೆ ಆರಂಭಿಸಲಾಗಿದೆ. ಆದರೆ ಈ ಮಾರ್ಗದಲ್ಲಿ ಸಂಚಾರ ನಡೆಸುವ ಸಾಮಾನ್ಯ ಬಸ್‌ಗಳು ಎಂದಿನಂತೆ ಎಲ್ಲಾ ನಿಲುಗಡೆ ನೀಡಿ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ವೇಗದೂತ’ ಬಸ್‌ಗಳು ಸೀಮಿತ ನಿಲುಗಡೆ ಹೊಂದಿರುವ ಕಾರಣ ಪ್ರಯಾಣದ ಸಮಯ ಉಳಿತಾಯವಾಗಲಿದೆ. ಆದ್ದರಿಂದ ಹೆಚ್ಚಿನ ಜನರು ಈ ಬಸ್ ಸೇವೆ ಬಳಕೆ ಮಾಡಿಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ರಾಯೋಗಿಕ ಸಂಚಾರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಇನ್ನೂ ಹಲವು ಮಾರ್ಗದಲ್ಲಿ ಈ ಮಾದರಿ ಸೇವೆ ನೀಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
2 ದಿವ್ಯ ದರ್ಶನ ಪ್ಯಾಕೇಜ್: ಬಿಎಂಟಿಸಿಯ ದಿವ್ಯ ದರ್ಶನ ಪ್ಯಾಕೇಜ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶನಿವಾರ ಮತ್ತು ಭಾನುವಾರ ಹೊಸ ದಿವ್ಯ ದರ್ಶನ 5, 6ನೇ ಪ್ಯಾಕೇಜ್ ಬಸ್‌ಗಳು ಸಂಚಾರವನ್ನು ನಡೆಸಲಿವೆ. ಈ ಬಸ್ ಸೇವೆಗೆ ಎಸಿ ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.