ಪಂಚಮಸಾಲಿ ಶ್ರೀಗಳ ಪರ ನಿಂತ ವಿವಿಧ ನಾಯಕರು!

0
74

ಬಾಗಲಕೋಟೆ: ವಿಷಾಹಾರ ಸೇವನೆಯಿಂದ ಅಸ್ವಸ್ಥಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ನಂತರ ಶ್ರೀಗಳು ಅಸ್ವಸ್ಥಗೊಂಡಿದ್ದರು. ಶನಿವಾರ ಬೆಳಗ್ಗೆ ತೀವ್ರ ಎದೆನೋವು, ತಲೆನೋವು, ವಾಂತಿ ಆಗಿದ್ದರಿಂದ ಶ್ರೀಗಳನ್ನು ತಕ್ಷಣ ಆಸ್ಪತ್ರೆಗೆ ಕರೆತರಲಾಗಿತ್ತು. ಕೆಲಕಾಲ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿದ್ದ ಸ್ವಾಮೀಜಿ ಅವರನ್ನು ಶನಿವಾರ ಮಧ್ಯಾಹ್ನ ವಿಶೇಷ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು.

ಸ್ವಾಮೀಜಿ ಅವರನ್ನು ಪಂಚಮಸಾಲಿ ಸಮಾಜದ ಮುಖಂಡರೂ ಆಗಿರುವ ಶಾಸಕರಾದ ಸಿ.ಸಿ. ಪಾಟೀಲ, ಅರವಿಂದ ಬೆಲ್ಲದ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಶ್ರೀಪೀಠದ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತಾಗಿ ಸ್ವಾಮೀಜಿ ಅವರೊಂದಿಗೆ ಗಂಟ್ಟೆಗಟ್ಟಲೇ ಪ್ರತ್ಯೇಕ ಚರ್ಚೆ ನಡೆಸಿದರು. ಕಾಶಪ್ಪನವರ ಏಕಪಕ್ಷೀಯ ನಿರ್ಧಾರದ ಬಗ್ಗೆ ಅಸಮಾಧಾನವನ್ನೂ ಹೊರಹಾಕಿದರು.

ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕರಾದ ಡಾ. ವೀರಣ್ಣ ಚರಂತಿಮಠ, ರಾಜಶೇಖರ ಶೀಲವಂತರ ಅವರೂ ಪ್ರತ್ಯೇಕವಾಗಿ ಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಶನಿವಾರ ಶ್ರೀಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಆಸ್ಪತ್ರೆಗೆ ಧಾವಿಸಿ ಶ್ರೀಗಳ ಆರೋಗ್ಯ ವಿಚಾರಿಸಿದ್ದರು.

ಕಾಶಪ್ಪನವರ ನಡೆಗೆ ಬೇಸರ: ಸ್ವಾಮೀಜಿ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಸಿ.ಸಿ.ಪಾಟೀಲ, ಕೂಡಲಸಂಗಮದಲ್ಲಿ ಪೀಠ ಸ್ಥಾಪನೆಗೆ ಹಣ ನೀಡಿದವರು ಮುರುಗೇಶ ನಿರಾಣಿ ಅವರು. ಪೀಠಕ್ಕೆ ಅನುದಾನ ನೀಡಿದ್ದು ಬಿಜೆಪಿ ಸರ್ಕಾರ. ಹೋರಾಟ ನಡೆದಾಗ ಸ್ಪಂದಿಸಿದ್ದು ಸಹ ನಮ್ಮದೇ ಸರ್ಕಾರ. ಶ್ರೀಮಠ ಹಾಗೂ ಸಮಾಜಕ್ಕೆ ವಿಜಯಾನಂದ ಕಾಶಪ್ಪನವರ ಕೊಡುಗೆ ಏನಿದೆ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, 2ಎ ಮೀಸಲಾತಿ ಹೋರಾಟದ ಅವಧಿಯಲ್ಲಿ ನಮ್ಮೊಂದಿಗಿದ್ದ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಸರ್ಕಾರ ರಚನೆ ನಂತರ ನಮ್ಮೊಂದಿಗೆ ನಿಲ್ಲಲಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ನಡೆಸಿದ ಹೋರಾಟದಲ್ಲಿ ಸ್ವಾಮೀಜಿ ಹಾಗೂ ನಮ್ಮ ಮೇಲೆ ಲಾಠಿಚಾರ್ಜ್ ಆಯಿತು. ಇದಕ್ಕೆ ಸರ್ಕಾರ ಹಾಗೂ ಪೊಲೀಸರೇ ನೇರ ಕಾರಣ ಎಂದು ಆರೋಪಿಸಿದರು.

ಸಮಾಜ ಮುಖಂಡ, ಮಾಜಿ ಶಾಸಕ ಎಚ್.ಶಿವಶಂಕರ ಮಾತನಾಡಿ, ನಮಗೆ ಪಂಚಮಸಾಲಿ ಸಮಾಜ ದೊಡ್ಡದು, ಟ್ರಸ್ಟ್ ಅಲ್ಲ. ವಿಜಯಾನಂದ ಕಾಶಪ್ಪನವರ್ ಟ್ರಸ್ಟ್ ಅಧ್ಯಕ್ಷರಾಗಿದ್ದರೂ ಪೀಠಾಧಿಪತಿ ಸ್ವಾಮೀಜಿಯೇ ಎಂದು ವಿಜಯಾನಂದ ಕಾಶಪ್ಪನವರ್ ವಿರುದ್ಧ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಕ್ರಿಯೆಗೆ ಸ್ವಾಮೀಜಿ ನಿರಾಕರಣೆ: ಶ್ರೀಪೀಠಕ್ಕೆ ಹೊಸ ಪೀಠಾಧಿಪತಿ ನೇಮಕಾತಿ ಕುರಿತು ಶಾಸಕ ವಿಜಯಾನಂದ ಕಾಶಪ್ಪನವರ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ನಿರಾಕರಿಸಿದರು. ಊಟದಲ್ಲಿ ವ್ಯತ್ಯಾಸವಾಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಒತ್ತಡಕ್ಕೆ ಎದೆನೋವು ಕಾಣಿಸಿಕೊಂಡಿತ್ತು. ಈಗ ಚೇತರಿಸಿಕೊಂಡಿದ್ದೇನೆ. ಭಕ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದ ಅವರು ಕಾಶಪ್ಪನವರ ಅವರ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.

Previous articleಭಗವಂತ ಖೂಬಾ ನನ್ನ ವಿರೋಧಿ ʻಟೀಮ್‌ ಕ್ಯಾಪ್ಟನ್ʼ
Next articleಧರ್ಮಸ್ಥಳ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ

LEAVE A REPLY

Please enter your comment!
Please enter your name here