ಬೆಂಗಳೂರು: ಮದುವೆ ಯಾವಾಗ…? ಮದುವೆ ಯಾವಾಗ…? ಎಂದು ಕೇಳುತ್ತಿದ್ದವರಿಗೆ ಕನ್ನಡದ ನಟಿ, ಖ್ಯಾತ ನಿರೂಪಕಿ ಅನುಶ್ರೀ ಕೊನೆಗೂ ಉತ್ತರ ಕೊಟ್ಟಿದ್ದಾರೆ?.
ಇದೇ ಆಗಸ್ಟ್ 28ರಂದು ನಗುಮೊಗದ ಚೆಲುವೆ ಅನುಶ್ರೀ ಮದುವೆ ಬುಹುತೇಕ ಫಿಕ್ಸ್ ಆಗಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಬೆಂಗಳೂರಿನಲ್ಲಿರುವ ಉದ್ಯಮಿ ರೋಷನ್ ಎನ್ನುವವರೊಂದಿಗೆ ಅನುಶ್ರೀ ಮದುವೆ ನಿಶ್ಚಯವಾಗಿದ್ದು, ಬೆಂಗಳೂರಿನಲ್ಲಿಯೇ ವಿವಾಹ ನಡೆಯಲಿದೆ ಎಂಬ ಸುದ್ದಿಗಳು ಗುರುವಾರ ವೈರಲ್ ಆಗಿದೆ. ಆದರೆ ಈ ಕುರಿತು ಅಧಿಕೃತವಾಗಿ ಅನುಶ್ರೀ ಮಾತನಾಡಿಲ್ಲ.
ಅನುಶ್ರೀ ನಿರೂಪಣೆ ಮಾಡುತ್ತಿದ್ದ ಹಲವು ಕಾರ್ಯಕ್ರಮಗಳಲ್ಲಿ ತಮಾಷೆಗಾಗಿ ಅವರ ಮದುವೆ ವಿಚಾರ ಪ್ರಸ್ತಾಪ ಆಗುತ್ತಿತ್ತು. ಈ ವರ್ಷ “ನನ್ನ ಮದುವೆ ಗ್ಯಾರಂಟಿ” ಎಂದು ಹೇಳಿದ್ದ ಕನ್ನಡದ ಖ್ಯಾತ ನಿರೂಪಕಿ ಮುಂದಿನ ತಿಂಗಳು ಹಸೆಮಣೆ ಏರಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಮದುವೆ ಆಗುವ ಹುಡುಗನ ಬಗ್ಗೆಯೂ ಮಾತನಾಡಿದ್ದ ನಿರೂಪಕಿ, “ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಲೈಫ್ ಬಗ್ಗೆ ಅಲ್ಲದಿದ್ರೂ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಆದರೆ, ಅವನೂ ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು” ಎಂದಿದ್ದರು.
ಹಲವು ಬಾರಿ ಅನುಶ್ರೀ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರು ಮರೆತು ಬಿಡುತ್ತಿದ್ದರು. ಈಗಲೂ ಸಹ ಗುರುವಾರ ಹಬ್ಬಿರುವ ಸುದ್ದಿಗಳ ಬಗ್ಗೆ, ಮದುವೆ ನಿಗದಿಯಾಗಿರುವ ಬಗ್ಗೆ ನಿರೂಪಕಿ ಅನುಶ್ರೀ ಅಧಿಕೃತವಾಗಿ ತಿಳಿಸಬೇಕಿದೆ.
ಮಂಗಳೂರಿನ ಸುರತ್ಕಲ್ ಮೂಲದ ಅನುಶ್ರೀ, ಕನ್ನಡ ಕಿರುತೆರೆಯಲ್ಲಿ ತಮ್ಮದೆಯಾದ ಹವಾ ಸೃಷ್ಟಿಸಿದ್ದಾರೆ. ಖಾಸಗಿ ಟಿವಿಯ ವಿವಿಧ ಕಾರ್ಯಕ್ರಮ, ಚಲನಚಿತ್ರ ರಂಗದ ಅನೇಕ ಕಾರ್ಯಕ್ರಮದಲ್ಲಿ ತಮ್ಮ ನಿರೂಪಣೆ, ಮಾತಿನ ಶೈಲಿ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಕಾರ್ಯಕ್ರಮ ಎಷ್ಟು ಬೇಗ ಜನರ ಮನಸ್ಸಿಗೆ ನಾಟುತ್ತದೆಯೋ ಅನುಶ್ರೀ ಅವರ ನಿರೂಪಣೆಯೂ ಜನರಿಗೆ ಹತ್ತಿರವಾಗಿದೆ.
ವೈಯಕ್ತಿಕ ಬದುಕಿನೊಂದಿಗೆ ವೃತ್ತಿ ಜೀವನದಲ್ಲೂ ಅನೇಕ ನೋವುಗಳ ಜತೆಗೆ ಹೋರಾಡಿ ಇಂದು ಸಿನಿಮಾ ಸ್ಟಾರ್ ನಟ-ನಟಿಯರೊಂದಿಗೆ ಗುರುತಿಸಿಕೊಳ್ಳುವ ಮಟ್ಟಿಗೆ ನಿರೂಪಕಿ ಅನುಶ್ರೀ ಬೆಳೆದು ನಿಂತಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಯಲ್ಲಿಯೂ ಅವರು ಅದೃಷ್ಟ ಪರೀಕ್ಷಿಸಿದ್ದಾರೆ.
ಮದುವೆಯಾದ್ರೆ ಮಳೆ-ಬೆಳೆ ಕಡಿಮೆಯಾಗುತ್ತೆ…
“ನಾನು ಮದುವೆಯಾದ್ರೆ ಮಳೆ-ಬೆಳೆ ಎಲ್ಲಾ ಕಡಿಮೆ ಆಗುತ್ತೆ” ಎಂದು ನಿರೂಪಕಿ ಅನುಶ್ರೀ ಅವರು ನಟ ಶಿವರಾಜ್‌ಕುಮಾರ ಎದುರಿಗೆ ವರ್ಷದ ಹಿಂದೆಯೇ ನಗೆ ಚಟಾಕಿ ಹಾರಿಸಿದ್ದರು.
ಕಾರ್ಯಕ್ರಮವೊಂದರಲ್ಲಿ ನಟ ಶಿವರಾಜ್ ಕುಮಾರ್ ಅನುಶ್ರೀ ಮದುವೆ ಬಗ್ಗೆ ನೇರವಾಗಿಯೇ ಮಾತನಾಡಿದ್ದರು, “ನಿನ್ನ ಮನಸ್ಸಲ್ಲಿ ಯಾರಾನಾ ಇದ್ರೆ ನನಗೆ ಹೇಳು, ಮದುವೆ ಮಾತುಕತೆ ಮುಗಿಸಿಯೇ ಬಿಡೋಣ” ಎಂದಿದ್ದಕ್ಕೆ ಅನುಶ್ರೀ “ಯಾರನ್ನೂ ಮನಸ್ಸಲ್ಲಿ ಬಚ್ಚಿಟ್ಟಿಲ್ಲ. ಮುಂದಿನ ವರ್ಷ ಮದುವೆಯಾಗುವುದು ಗ್ಯಾರಂಟಿ, ನಾನು ಮದುವೆಯಾದ್ರೆ ಮಳೆ-ಬೆಳೆ ಎಲ್ಲಾ ಕಡಿಮೆ ಆಗುತ್ತೆ” ಎಂದು ತಮಾಷೆ ಮಾಡಿದ್ದರು.
ವೇದಿಕೆಯಲ್ಲಿಯೇ ಮದುವೆ ಮುಂದಿನ ವರ್ಷ ಮದುವೆ ಫಿಕ್ಸ್ ಎಂದು ಶಿವರಾಜ್‌ಕುಮಾರ್ ಎದುರಿನಲ್ಲಿಯೇ ಅನುಶ್ರೀ ಕನ್ಫರ್ಮ್ ಮಾಡಿದ್ದು, ಅಂದಿನಿಂದ ಅವರ ಅಭಿಮಾನಿಗಳಲ್ಲಿ ಹುಡುಗ ಯಾರು? ಶಿವಣ್ಣನೇ ಹುಡುಗನನ್ನು ಹುಡುಕುತ್ತಾರಾ? ಎನ್ನುವ ಪ್ರಶ್ನೆಯನ್ನಂತೂ ಹುಟ್ಟಿಹಾಕಿತ್ತು.