ಹುಬ್ಬಳ್ಳಿ: ಇಲ್ಲಿನ ವಿಜಯನಗರದಲ್ಲಿ ಬಾಲಕಿಯ ಕೊಲೆ ಪ್ರಕರಣದಲ್ಲಿ ಎನ್‌ಕೌಂಟರ್ ಆಗಿ ಆರು ದಿನ ಕಳೆದರೂ ಆರೋಪಿ ರಿತೇಶಕುಮಾರ ಕುಟುಂಬಸ್ಥರು ಪತ್ತೆಯಾಗಿಲ್ಲ. ಹೀಗಾಗಿ ಆರೋಪಿ ಶವ ಮರಣೋತ್ತರ ಪರೀಕ್ಷೆ ನಡೆದರೂ ಅಂತ್ಯಕ್ರಿಯೆ ನಡೆಸದೇ ಕೆಎಂಸಿ ಆರ್‌ಐ ಆಸ್ಪತ್ರೆಯ ಶವಾಗಾರದಲ್ಲಿಯೇ ಇಡಲಾಗಿದೆ.
ಹಳೇಹುಬ್ಬಳ್ಳಿ ಠಾಣೆ ಪೊಲೀಸರು, ಆರೋಪಿ ಬಿಹಾರದ ರಿತೇಶಕುಮಾರ್‌ನ ವಿಳಾಸ ಪತ್ತೆಗೆ ಬಿಹಾರದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದರ ಜೊತೆಗೆ ಬೇರೆ ಬೇರೆ ಜಿಲ್ಲೆಗಳಿಗೂ ವಿಶೇಷ ತಂಡಗಳನ್ನು ಕಳಿಸಲಾಗಿದೆ. ಆದರೂ ಕೂಡ ಆರೋಪಿ ಕುಟುಂಬಸ್ಥರು ಪತ್ತೆಯಾಗಿಲ್ಲ. ಹುಡಕಾಟ ನಡೆಸಿ ನಾಲ್ಕು ದಿನವಾದರೂ ಕುಟುಂಬಸ್ಥರಿಗಾಗಿ ಆರೋಪಿ ಭಾವಚಿತ್ರ ಹಿಡಿದು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಎರಡು ಪ್ರತ್ಯೇಕ ತಂಡ ರಚಿಸಿರುವ ಪೊಲೀಸರು, ಬಾಲಕಿಯನ್ನು ಕೊಲೆ ಮಾಡಿದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಮುಂದುವರಿಸಿ, ಆರೋಪಿ ಓಡಾಡಿದ್ದ ಎನ್ನುವ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಖಾಸಗಿಯಾಗಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಆರೋಪಿ ಕುಟುಂಬದವರ ಪತ್ತೆ ಕಾರ್ಯ ನಡೆಯುತ್ತಿದೆ. ಹೊರ ರಾಜ್ಯ ಸೇರಿದಂತೆ ಸ್ಥಳೀಯವಾಗಿಯೂ ಅವನ ಪರಿಚಯದವರು ಯಾರಾದರೂ ಇದ್ದಾರೆಯೇ ಎಂದು ಮಾಹಿತಿ ಸಂಗ್ರಹಿಸುತ್ತಿದ್ದೇವೆ. ನ್ಯಾಯಾಲಯದ ಮುಂದಿನ ಆದೇಶದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಮಹಾನಿಂಗ ನಂದಗಾವಿ ಹೇಳಿದರು.
ಆರೋಪಿ ರಿತೇಶಕುಮಾರ ಶವವನ್ನು ಫ್ರೀಜರ್‌ನಲ್ಲಿ ಇಡಲಾಗಿದೆ. ಆತನ ಕುಟುಂಬಸ್ಥರು ಪತ್ತೆಯಾಗಿಲ್ಲ. ಕೋರ್ಟ್ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಂಸಿಆರ್‌ಐ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ್ ಹೇಳಿದರು.