ಬೆಂಗಳೂರು: ರಾಜ್ಯದಲ್ಲಿ ೪೧ ಔಷಧಿಗಳನ್ನು ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಮಾರುಕಟ್ಟೆಯಿಂದ ಆರೋಗ್ಯ ಇಲಾಖೆ ಹಿಂಪಡೆದಿದೆ.
೨೦೨೫ರ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಜಾಗೃತ ದಳದ ಅಧಿಕಾರಿಗಳು ಔಷಧೀಯ ಗುಣಮಟ್ಟವನ್ನು ಪರಿಶೀಲಿಸಲು ರಾಜ್ಯಾದ್ಯಂತ ಪರಿಶೀಲನಾ ದಾಳಿ ನಡೆಸಿತ್ತು. ಈ ವೇಳೆ ಸಾವಿರಾರು ಔಷಧಿಗಳ ಸ್ಯಾಂಪಲ್‌ಗಳನ್ನು ಕಲೆಹಾಕಲಾಗಿತ್ತು. ಹಾಗೆ ಸಂಗ್ರಹಿಸಲಾದ ಔಷಧಿಗಳನ್ನು ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿರುವ ಪ್ರಯೋಗಾಲಯಗಳಿಗೆ ಗುಣಮಟ್ಟ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇದೀಗಾ ಪ್ರಯೋಗಾಲಯಗಳಿಂದ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ೧೮೯೧ ಸ್ಯಾಂಪಲ್‌ಗಳ ಪೈಕಿ ಬರೋಬ್ಬರಿ ೪೧ ಸ್ಯಾಂಪಲ್‌ಗಳು ಕಳಪೆ ಗುಣಮಟ್ಟದ್ದವೆಂದು ತಿಳಿದುಬಂದಿದೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಬಾಣಂತಿಯರ ಸರಣಿ ಸಾವಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿರುವ ಔಷಧಿಗಳ ಗುಣಮಟ್ಟವನ್ನು ಪರಿಶೀಲಿಸುವಂತೆ ಸರ್ಕಾರ ಆದೇಶಿಸಿರುವ ಬೆನ್ನಲ್ಲೇ ಆರೋಗ್ಯ ಇಲಾಖೆಯ ಜಾಗೃತ ದಳ ಈ ಪರಿಶೀಲನಾ ದಾಳಿಯನ್ನು ಎಲ್ಲೆಡೆ ನಡೆಸುತ್ತಿದೆ.
ಬಳ್ಳಾರಿಯಲ್ಲಿ ಕೆಲದಿನ ತಂಗಿದ್ದ ಜಾಗೃತ ದಳದ ಅಧಿಕಾರಿಗಳು ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದ ಐವಿ ದ್ರವ್ಯವನ್ನು ಪರೀಕ್ಷೆಗೆ ಒಳಪಡಿಸಿತ್ತು. ಹಾಗೆ ಪರೀಕ್ಷಿಸಲಾದ ೧೯೬ ಐವಿ ದ್ರವ್ಯದ ಮಾದರಿಗಳ ಪೈಕಿ ೧೧೩ ಮಾದರಿಗಳು ಸಾಮಾನ್ಯ ಗುಣಮಟ್ಟದ್ದೆಂದು ಕಂಡುಬಂದಿದೆ. ಇದರಿಂದಾಗಿ ೭೮ ಕಾನೂನು ಪ್ರಕರಣಗಳು ದಾಖಲಾಗಿಸಲಾಗಿದೆ ಎನ್ನಲಾಗಿದೆ. ಇದಲ್ಲದೆ, ಔಷಧ ನಿಯಂತ್ರಣ ಅಧಿಕಾರಿಗಳು ರಾಜ್ಯಾದ್ಯಂತ ಸುಮಾಋಉ ೨೦೭೮ ಮೆಡಿಕಲ್ ಶಾಪ್‌ಗಳ ಮೇಲೆ ದಾಳಿ ನಡೆಸಿದ್ದು ಹಲವು ನಿಯಮಗಳ ಉಲ್ಲಂಘನೆಯ ಆರೋಪದಡಿ ೨೧೫ ಔಷದಾಲಯಗಳ ಪರವಾನಿಗೆ ರದ್ದುಪಡಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಕಳೆದ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಡ್ರಗ್ಸ್ ಅಂಡ್ ಕಾಸ್ಮೋಟಿಕ್ಸ್ ಕಾಯ್ದೆಯನ್ವಯ ರಾಜ್ಯದಲ್ಲಿ ೨೮ ಪ್ರಕರಣಗಳನ್ನು ದಾಖಲಿಸಲಾಗಿದ್ದು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿರುವ ಔಷಧಗಳ ಪೈಕಿ ಬಹುತೇಕವೂ ಪ್ಯಾರಾಸೈಟಮಾಲ್, ಸೋಡಿಯಂ ಕ್ಲೋರೈಡ್ ಲಸಿಕೆಗಳು, ಲಿವೋಸಿಟ್ರಿಜಿನ್, ಅಜಿತ್ರೋಮೈಸಿನ್, ಮೆಟ್‌ಪಾರ್ಮಿನ್, ವಿಟಮಿನ್ ಡಿ೩ ಮತ್ತು ಐರನ್ ಫೋಲಿಕ್ ಆಸಿಡ್ ಮಾತ್ರೆಗಳಾಗಿವೆ ಎಂದಿದ್ದಾರೆ.
ರಾಜ್ಯದಲ್ಲಿ ಮಾರಾಟವಾಗುತ್ತಿರುವ ಔಷಧಗಳ ಮೇಲೆ ಕಣ್ಗಾವಲಿಡಲು ಸರ್ಕಾರ ಗುಣಮಟ್ಟವಿಲ್ಲದ ಔಷಧಗಳನ್ನು ಸರಬರಾಜು ಹಂತದಲ್ಲೇ ಪತ್ತೆ ಹಚ್ಚಲೆಂದೇ ಸಾಫ್ಟವೇರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದು ಈ ತಂತ್ರಜ್ಞಾನದ ಅಳವಡಿಕೆಯಿಂದ ಕಳಪೆ ಗುಣಮಟ್ಟದ ಔಷಧಗಳನ್ನು ಮಾರುಕಟ್ಟೆಯಿಂದ ಹೊರಗಿಡಲು ಕಂಕಣಬದ್ಧರಾಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ತಂತ್ರಜ್ಞಾನದ ವೇದಿಕೆಯು ಸಗಟು ಮತ್ತು ಚಿಲ್ಲರೆ ಔಷಧ ಮಾರಾಟಗಾರರ ಮತ್ತು ನೋಂದಾಯಿತ ಏಜೆಂಟ್‌ಗಳ ಸಂಪೂರ್ಣ ವಿವರಗಳನ್ನು ಕಲೆಹಾಕಲಿದೆ.
ಪ್ರತಿ ಬಾರಿ ಔಷಧಾಲಯಗಳ ಮೇಳೆ ದಾಳಿ ನಡೆಸಿದಾಗಲೂ ಮತ್ತೆ ಮತ್ತೆ ಕಳಪೆ ಗುಣಮಟ್ಟದ, ಸಾಮಾನ್ಯ ಗುಣಮಟ್ಟದ ಔಷಧಿಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂತಹ ಔಷಧ ಮಾರಾಟಗಾರರ ವಿರುದ್ಧ ವ್ಯಯಕ್ತಿಕವಾಗಿಯೂ, ಸಂಸ್ಥೆಗಳ ಮೇಲೆ ಸಾಮೂಹಿಕವಾಗಿಯೂ ಕಠಿಣ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆದಿದ್ದು ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.