ಸಂಯುಕ್ತ ಕರ್ನಾಟಕದ ವರದಿ ಉಲ್ಲೇಖಿಸಿ ಯತೀಂದ್ರಗೆ ಆರ್.ಅಶೋಕ ಟಾಂಗ್

1
154

ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸೂರ್ಯನಾರಾಯಣ ನರಗುಂದಕರ ಅವರ ವಿಶೇಷ ವರದಿ ಉಲ್ಲೇಖಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ, ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ. ಆ ವರದಿ ಇಲ್ಲಿದೆ.

ಗದಗ: ಇದು ಗದಗ ಜಿಲ್ಲೆ ಶಿರಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ವಸತಿ ನಿಲಯದ ವ್ಯಥೆ.. ಊಟ ಸಿಗದೆ ಆ ಹಾಸ್ಟೆಲ್‌ನ 250 ವಿದ್ಯಾರ್ಥಿನಿಯರು ಮನೆಗೆ ತೆರಳಿದ ಕರುಣಾಜನಕ ಕಥೆ. ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೆ ಸರಿಯಾಗಿ ಊಟ ನೀಡುತ್ತಿಲ್ಲ, ಕಾಫಿ, ಟೀ, ಸ್ನ್ಯಾಕ್ಸ್ ಕೊಡುತ್ತಿಲ್ಲ. ಒಂದು ಮೊಟ್ಟೆಯಲ್ಲಿ 2 ಭಾಗ ಮಾಡಿ ಇಬ್ಬರು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ.

ಒಂದೇ ಚಪಾತಿ ಅಥವಾ ರೊಟ್ಟಿ, ಒಂದು ಚಿಕ್ಕ ಸೌಟ್ ಅನ್ನ, ಸಾಂಬಾರ್, ಉಪ್ಪಿನಕಾಯಿ. ವಿದ್ಯಾರ್ಥಿನಿಯರು ಇನ್ನೊಮ್ಮೆ ಸಾಂಬಾರ್ ಕೇಳಿದರೆ ಉಪ್ಪಿನಕಾಯಿ ಹಚ್ಚಿಕೊಂಡು ಊಟ ಮಾಡಿ ಎಂದು ಗದರುತ್ತಾರೆ. ಊಟಕ್ಕೆ ವಿಳಂಬವಾಗಿ ಆಗಮಿಸುವ ವಿದ್ಯಾರ್ಥಿನಿಯರು ಊಟ ಇಲ್ಲದೇ ಉಪವಾಸ ಮಲಗುವಂತಹ ದುಸ್ಥಿತಿ ತಲೆದೋರಿದೆಯೆಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇದನ್ನು ಪ್ರತಿಭಟಿಸಿ 250ಕ್ಕೂ ಹೆಚ್ಚು ಮಕ್ಕಳು ಸಾಮಗ್ರಿ ಪ್ಯಾಕ್ ಮಾಡಿಕೊಂಡು ಊರಿಗೆ ತೆರಳಿದ್ದಾರೆ. ಮಕ್ಕಳು ದೈಹಿಕವಾಗಿ ಸೊರಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಸತಿ ನಿಲಯದಲ್ಲಿ ಮಕ್ಕಳನ್ನು ಯಾವ ಪುರುಷಾರ್ಥಕ್ಕೆ ಅಧ್ಯಯನಕ್ಕೆ ಬಿಡಬೇಕೆಂದು ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾಲಕರ ದೂರು: ವಿದ್ಯಾರ್ಥಿನಿಯರಿಂದ ಅಡುಗೆ ಮಾಡಿಸಿ ಊಟ ಬಡಿಸುವಂತೆ ಮಾಡಿರುವುದು ಅಮಾನವೀಯ. ಊಟ ಸರಿಯಾಗಿ ನೀಡದಿರುವ ಬಗ್ಗೆ ಪ್ರಶ್ನಿಸಿದರೆ ರೇಷನ್ ಖಾಲಿಯಾಗಿದೆಯೆಂದು ಪ್ರಾಂಶುಪಾಲರು ಹಾರಿಕೆ ಉತ್ತರ ನೀಡುತ್ತಾರೆ ಎಂದು ಪಾಲಕರಾದ ಜಗದೀಶ ವಾಲ್ಮೀಕಿ, ಗುರುಪಾದಪ್ಪ ದೊಡ್ಡನ್ನವರ ಬೇಸರ ವ್ಯಕ್ತಮಾಡಿದರು.

ತೊಂದರೆ ಏನು..?: ವಸತಿ ನಿಲಯಕ್ಕೆ ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆದಾರ ಸಮರ್ಪಕವಾಗಿ ಸಾಮಗ್ರಿ ಪೂರೈಸದ ಕಾರಣ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುವಂತಾಗಿದೆ. ವಸತಿ ಶಾಲೆಯಲ್ಲಿನ ಪ್ರಾಂಶುಪಾಲರು, ಅಡುಗೆಯವರು, ಮೇಲ್ವಿಚಾರಕರ ಮಧ್ಯದ ಶೀತಲ ಸಮರದಿಂದ ವಿದ್ಯಾರ್ಥಿನಿಯರೇ ಅಡುಗೆ ಮಾಡಿಕೊಂಡು ಊಟ ಮಾಡುವುದು ಅನಿವಾರ್ಯವಾಗಿದೆ.

ಇನ್ಮುಂದೆ ಎಚ್ಚರವಹಿಸ್ತೇವೆ: ವಸತಿ ಶಾಲೆಯ ಪ್ರಾಂಶುಪಾಲರ ಹಾಗೂ ಮೇಲ್ವಿಚಾರಕ ಸಭೆ ಕರೆದು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಇಂತಹ ಸಮಸ್ಯೆಯಾಗದಂತೆ ಇನ್ನುಮುಂದೆ ಎಚ್ಚರ ವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಕರಾದ ನಂದಾ ಹನಬರಟ್ಟಿ ಹೇಳಿದ್ದಾರೆ.

ನಮಗೆ ಕೊಡ್ತಿರುವುದೇ ಕಳಪೆ ತರಕಾರಿ: ಸಮರ್ಪಕ ಧವಸ ಧಾನ್ಯ ಬಳಸದೆ, ಕಳಪೆ ತರಕಾರಿ ಬಳಸಿ ಗುಣಮಟ್ಟ ಅಡುಗೆ ಮಾಡಲು ಹೇಗೆ ಸಾಧ್ಯ? 240 ಮಕ್ಕಳಿಗೆ ಒಂದು ಹೊತ್ತಿಗೆ ನಾಲ್ಕು ಕೆ.ಜಿ ಬೇಳೆ ಕೊಡುವ ಸ್ಥಳದಲ್ಲಿ 2ರಿಂದ ಎರಡೂವರೆ ಕೆ.ಜಿ ಬೇಳೆ, ಒಂದು ಕೆ.ಜಿ ಸಕ್ಕರೆಗೆ 250 ಗ್ರಾಂ ಚಹಾ ಪುಡಿ ನೀಡಿ ಎಲ್ಲರಿಗೂ ಇದರಲ್ಲಿಯೇ ಅಡುಗೆ ಸಿದ್ಧಪಡಿಸಲು ತಿಳಿಸಿದರೆ ಕಳಪೆ ಮಟ್ಟದ ಆಹಾರ ಒದಗಿಸುವುದು ನಮಗೆ ಅನಿವಾರ್ಯ ಎಂಬುದು ಅಡುಗೆ ಮಾಡುವವರ ಅಳಲು.

ಈ ಕುರಿತಂತೆ ಪ್ರಾಂಶುಪಾಲರಾದ ಡಿ.ಸಿ. ನರೇಗಲ್ ಮಾತನಾಡಿ, ವಸತಿ ನಿಲಯಕ್ಕೆ ಸಮರ್ಪಕವಾಗಿ ಗುತ್ತಿಗೆದಾರರು ಆಹಾರ ಸಾಮಗ್ರಿ ಪೂರೈಸಿಲ್ಲ. ಅಲ್ಪ ಆಹಾರ ಪದಾರ್ಥದಿಂದ ಆಹಾರ ತಯಾರಿಸಿ ನೀಡುತ್ತಿದ್ದೇವೆ. ಇಲಾಖೆಯಿಂದ ಬಂದಿರುವ ಆಹಾರ ಪದಾರ್ಥಗಳು ಖಾಲಿಯಾಗಿವೆ. ಶೀಘ್ರದಲ್ಲಿ ಆಹಾರ ಸಾಮಗ್ರಿ ಮುಕ್ತ ಮಾರುಕಟ್ಟೆಯಿಂದ ಖರೀದಿಸಿ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಈ ವರದಿಗೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸ್ಪಂದಿಸಿದ್ದು, “ಶತಮಾನದ ಹಿಂದೆಯೇ ಹೆಣ್ಣುಮಕ್ಕಳಿಗೆ ಶಾಲೆ, ಕಾಲೇಜು, ವಸತಿ ನಿಲಯ ನಿರ್ಮಿಸಿ ಶಿಷ್ಯವೇತನ ನೀಡಿದ್ದ ಕರ್ನಾಟಕದ ಭಾಗ್ಯವಿಧಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಸರ್ಕಾರಿ ವಸತಿ ಶಾಲೆಗಳಲ್ಲಿ ಹೊಟ್ಟೆಗೆ ಊಟವಿಲ್ಲದೆ 250 ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ಕರ್ನಾಟಕ ದೌರ್ಭಾಗ್ಯವಿಧಾತ ಸಿಎಂ ಸಿದ್ದರಾಮಯ್ಯ ಅವರೆಲ್ಲಿ?” ಎಂದು ಹೇಳಿದ್ದಾರೆ.
“ಹಲೋ ಅಪ್ಪ ಖ್ಯಾತಿಯ ಡಾ ಯತೀಂದ್ರ ಅವರೇ, ಈ ಸುದ್ದಿ ಒಮ್ಮೆ ನೋಡಿ. ನಿಮ್ಮ ತಂದೆಯವರ “ಕೊಡುಗೆ”ಯನ್ನ ನೀವೇ ಮೆಚ್ಚಿಕೊಳ್ಳಬೇಕು.” ಎಂದು ಅವರು ಬರೆದುಕೊಂಡಿದ್ದಾರೆ.

Previous articlePahalgam Attack: ಪಹಲ್ಗಾಮ್‌ ದಾಳಿ ಮಾಸ್ಟರ್ ಮೈಂಡ್ ಎನ್‌ಕೌಂಟರ್‌ಗೆ ಬಲಿ
Next articleGovernment Employee: ಸರ್ಕಾರದ ಮುಂದೆ ರಾಜ್ಯ ಸರ್ಕಾರಿ ನೌಕರರ ಹೊಸ ಬೇಡಿಕೆ

1 COMMENT

LEAVE A REPLY

Please enter your comment!
Please enter your name here