ರಾಯಚೂರು: ಹನಿಟ್ರ್ಯಾಪ್ ಇಂದಿನದಲ್ಲ. ೨೫ ವರ್ಷಗಳ ಹಿಂದೆಯೇ ರಾಯಚೂರಿನಲ್ಲಿ ಹನಿಟ್ರ್ಯಾಪ್ ನಡೆದಿತ್ತು ಎಂದು ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಹೊಸ ಬಾಂಬ್ ಸಿಡಿಸಿದರು. ಆದರೆ, ಈ ಹಿಂದೆ ಯಾರ ಮೇಲೆ ಹನಿಟ್ರ್ಯಾಪ್ ನಡೆದಿತ್ತು ಎಂಬುವುದನ್ನು ಶಾಸಕರು ಸ್ಪಷ್ಟಪಡಿಸಲಿಲ್ಲ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಚಿವರೇ ಹನಿಟ್ರ್ಯಾಪ್ ಕುರಿತು ಹೇಳಿದ್ದಾರೆ. ಇದಕ್ಕಿಂತ ದುರಂತ ಮತ್ತೊಂದಿಲ್ಲ. ಈ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರು ಹಾಗೂ ಶಾಸಕರಿಗೆ ಅಭದ್ರತೆ ಕಾಡುತ್ತಿದೆ. ಹನಿಟ್ರ್ಯಾಪ್ ಮೂಲಕ ಭಿನ್ನಮತ ಬುಗಿಲೆದ್ದಿದೆ ಎಂದು ಹೇಳಿದರು.
ಸಚಿವ ಕೆ.ಎನ್ ರಾಜಣ್ಣ ಅವರು ಹನಿಟ್ರ್ಯಾಪ್ ಕುರಿತು ಮಾತನಾಡಿದನ್ನು ಬಿಜೆಪಿ ಪಕ್ಷದ ಎಲ್ಲರೂ ಬೆಂಬಲಿಸಿದ್ದೇವೆ. ಸಚಿವ ರಾಜಣ್ಣ ಅವರು ಹಿರಿಯ ನಾಯಕರು ಎಲ್ಲರೂ ಒಪ್ಪುವಂತ ವ್ಯಕ್ತಿಯಾಗಿದ್ದಾರೆ. ಅವರು ದೂರು ಸಲ್ಲಿಸಲು ತಿಳಿಸಿದ್ದಾರೆ. ಯಾವಾದಾದರೂ ಒತ್ತಡ ಇರಬಹುದು ಎಂದು ತಿಳಿಸಿದರು.
ವಿಧಾನಸಭೆ ಕಲಾಪದ ಸಂದರ್ಭದಲ್ಲಿ ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸದೆ ವಿಧಾನ ಸಭಾಧ್ಯಕ್ಷರ ಮೂಲಕ 18 ಶಾಸಕರ ಅಮಾನತು ಮಾಡಿರುವ ಕಾಂಗ್ರೆಸ್ ಧೋರಣೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ದೂರಿದರು. ಜನರಿಂದ ಆಯ್ಕೆಯಾದ ಶಾಸಕರನ್ನು ಅಮಾನತು ಮಾಡುವುದು ಸಂವಿಧಾನದ ವಿರೋಧಿ ನಡೆಯಾಗಿದೆ. ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ. ೪ರಷ್ಟು ಮೀಸಲಾತಿ ನೀಡುವುದು ಸಂವಿಧಾನಕ್ಕೆ ಮಾಡಿರುವ ದ್ರೋಹ. ಅವರು ದಲಿತರ ಹಣವನ್ನು ಗ್ಯಾರಂಟಿಗೆ ವಿನಿಯೋಗಿಸಲಾಗುತ್ತಿರುವುದು ಅಕ್ಷಮ್ಯವೇ ಸರಿ ಎಂದು ಟೀಕಿಸಿದರು.