2021ರ ವಿಧಾನಪರಿಷತ್ ಚುನಾವಣೆ: ಮರು ಮತ ಎಣಿಕೆ ಕಾರ್ಯ ಆರಂಭ

election

ಚಿಕ್ಕಮಗಳೂರು: ನ್ಯಾಯಾಲಯದ ಸೂಚನೆ ಹಿನ್ನಲೆಯಲ್ಲಿ 2021 ಡಿಸೆಂಬರ್ 10 ರಂದು ನಡೆದಿದ್ದ ವಿಧಾನಪರಿಷತ್ ಚುನಾವಣೆಯ ಮರು ಮತ ಎಣಿಕೆ ಕಾರ್ಯ ಚಿಕ್ಕಮಗಳೂರಿನ ಐ.ಡಿ.ಎಸ್.ಜೆ ಕಾಲೇಜಿನಲ್ಲಿ ಆರಂಭಗೊಂಡಿದೆ.

ಜಿಲ್ಲಾ ಖಜಾನೆಯಿಂದ ಬ್ಯಾಲೆಟ್ ಪೇಪರ್ ಬಾಕ್ಸ್ ಗಳನ್ನು ಅಧಿಕಾರಿಗಳು ಮರು ಎಣಿಕೆ ಕೇಂದ್ರಕ್ಕೆ ಕೊಂಡೊಯ್ದಿದ್ದಾರೆ. ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತನ್ನು ಕೈಗೊಳ್ಳಲಾಗಿದ್ದು, ಮತ ಎಣಿಕೆ ನಡೆಯುವ ಕೇಂದ್ರದ ಒಳಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಅವರ ಜೊತೆಯಲ್ಲಿ ಓರ್ವ ಏಜೆಂಟ್ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ವಿಧಾನಪರಿಷತ್ ಚುನಾವಣೆಯಲ್ಲಿ ಪರಾಜಿತ ಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 12 ನಾಮನಿರ್ದೇಶಿತ ಮತಗಳನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು, ಮೂರು ವರ್ಷಗಳಿಂದ ವಿಚಾರಣೆ ನಡೆಸಿದ್ದ ಉಚ್ಚ ನ್ಯಾಯಾಲಯವು ನಾಮನಿರ್ದೇಶಿತರಿಗೆ ಮತದಾನದ ಹಕ್ಕಿಲ್ಲ ಎಂಬ ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸರ್ವೋಚ್ಚ ನ್ಯಾಯಾಲಯವು ಕೂಡ ಹೈ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದು 12 ನಾಮನಿರ್ದೇಶಿತ ಮತಗಳನ್ನು ಬಿಟ್ಟು ಮರುಮತ ಎಣಿಕೆಗೆ ಆದೇಶ ನೀಡಿತ್ತು ಹೀಗಾಗಿ ಇಂದು ನ್ಯಾಯಾಲಯದ ನಿರ್ದೇಶನದಂತೆ ಮರುಮತ ಎಣಿಕೆ ಕಾರ್ಯ ಆರಂಭಗೊಂಡಿದೆ.

ಈ ಅಗ್ನಿ ಪರೀಕ್ಷೆಯಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಅನ್ನೋದು ನ್ಯಾಯಾಲಯದ ಮೂಲಕವೇ ತಿಳಿದು ಬರಬೇಕಿದೆ.