18 ಲಕ್ಷ ಕಿಮೀ ಸಂಚರಿಸಿದ ʻವಂದೇ ಭಾರತ್ʼ

0
61
ಅಶ್ವಿನಿ ವೈಷ್ಣವ್

ಪ್ರಧಾನಿ ಮೋದಿ ನಿರ್ದೇಶನದಂತೆ ವಿಶ್ವದರ್ಜೆಯ ಹಾಗೂ ಅತಿ ವೇಗವಾಗಿ ಸಂಚರಿಸುವ “ವಂದೇ ಭಾರತ್’ ರೈಲು ಸಿದ್ಧಗೊಂಡಿದ್ದು, ಅದು ೨೦೧೮ರಿಂದ ಸೇವೆ ನೀಡುತ್ತ ಈವರೆಗೆ ೧೮ ಲಕ್ಷ ಕಿ.ಮೀ. ಸಂಚರಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ನವೀಕೃತ ಧಾರವಾಡ ರೈಲು ನಿಲ್ದಾಣ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ರೈಲಿನಲ್ಲಿ ಯಾವುದೇ ಗಂಭೀರ ಸಮಸ್ಯೆ ಕಂಡುಬರದ ಹಿನ್ನೆಲೆಯಲ್ಲಿ ಇದೇ ಮಾದರಿಯ ೭೫ ರೈಲುಗಳನ್ನು ಉತ್ಪಾದಿಸಲಾಗುತ್ತಿದೆ. ಬುಲೆಟ್ ಟ್ರೇನ್ ೦-೧೦೦ ವೇಗ ಪಡೆಯಲು ೫೫ ಸೆಕೆಂಡ್ ತೆಗೆದುಕೊಂಡರೆ ನಮ್ಮ ಭಾರತೀಯ ರೈಲು ಕೇವಲ ೫೨ ಸೆಕೆಂಡ್‌ಗಳಲ್ಲಿ ಈ ವೇಗವನ್ನು ಪಡೆದುಕೊಳ್ಳುವುದು ವಿಶೇಷ. ನಮ್ಮ ಹೆಮ್ಮೆಯ ರೈಲು ೧೮೦ ಕಿ.ಮೀ. ಪ್ರತಿ ಗಂಟೆ ವೇಗದಲ್ಲಿ ಓಡುವಾಗಲೂ ರೈಲಿನಲ್ಲಿ ನೀರು ತುಂಬಿದ ಗ್ಲಾಸ್‌ನಿಂದ ನೀರು ಅಲುಗಾಡುವುದಿಲ್ಲ, ಆದರೆ ಇದರಿಂದ ಜಗತ್ತು ನಲುಗಿಹೋಗಿದೆ. ಭಾರತೀಯ ಎಂಜಿನೀಯರ್‌ಗಳ ಸಾಧನೆಯನ್ನು ವಿಶ್ವ ಬೆರಗುಗಣ್ಣುಗಳಿಂದ ನೋಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ವಾರಕ್ಕೆರಡು ಬಾರಿ ವಾರಣಾಸಿಗೆ ರೈಲು:
ಹುಬ್ಬಳ್ಳಿಯಿಂದ ಪ್ರಯಾಣ ಬೆಳೆಸುವ ವಾರಣಾಸಿ ರೈಲು ವಾರಕ್ಕೆರಡು ಬಾರಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಜನರ ಬೇಡಿಕೆ ಈಡೇರಿಕೆಗೆ ಆದ್ಯತೆ ನೀಡಲಾಗುವುದು. ಧಾರವಾಡದ ತಪೋವನ ಬಳಿಯ ರೈಲ್ವೆ ಗೇಟ್‌ನಲ್ಲಿ ರೈಲ್ ಅಂಡರ್ ಬ್ರಿಡ್ಜ್ (ಆರ್‌ಯುಬಿ) ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Previous articleಪರಿಸರವಾದಿಗಳ ಮನವೊಲಿಸುವ ಕೆಲಸ ಮಾಡಿ: ಅಶ್ವಿನಿ ವೈಷ್ಣವ್
Next articleಬ್ರಾಹ್ಮಣರಿಗೆ ಮೀಸಲಾತಿ; ಅಧಿವೇಶನದಲ್ಲಿ ಧ್ವನಿ ಎತ್ತುವೆ: ಯತ್ನಾಳ