ಶ್ರೀರಂಗಪಟ್ಟಣ: 16ರಿಂದ 18ರ ವರೆಗೆ ಮೂರು ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ಮಹೋತ್ಸವ ನಡೆಯಲಿದ್ದು, ಜಂಬೂಸವಾರಿ ಆರಂಭವಾಗಲಿರುವ ಕಿರಂಗೂರು ಬನ್ನಿಮಂಟಪ ಹಾಗೂ ಪಟ್ಟಣದ ವೇದಿಕೆ ಸ್ಥಳಕ್ಕೆ ಶಾಸಕರಾದ ಎ.ಬಿ. ರಮೇಶ ಬಂಡಿಸಿದ್ದೇಗೌಡ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಅಧಿಕಾರಿಗಳೊಂದಿಗೆ ತೆರಳಿ ಸ್ಥಳ ಪರಿಶೀಲಿಸಿದ ಶಾಸಕರು, ಬನ್ನಿಮಂಟಪದ ಅಲಂಕಾರ ಹಾಗೂ ಪಕ್ಕದಲ್ಲಿನ ಕಲ್ಯಾಣಿಯ ದುರಸ್ತಿ ಸೇರಿದಂತೆ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಅಂಬಾರಿ ಮೆರವಣಿಗೆ ಸಾಗುವ ಬೆಂಗಳೂರು-ಮೈಸೂರು ಹೆದ್ದಾರಿ ಸೇರಿದಂತೆ ಶ್ರೀರಂಗಪಟ್ಟಣದ ಮುಖ್ಯ ರಸ್ತೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಹಾಗೂ ಭದ್ರತೆ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆಯ ಸ್ಥಳವನ್ನು ಪರಿಶೀಲಿಸಿದ ಅವರು, ಕಾರ್ಯಕ್ರಮದಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ಎಚ್ಚರಿಕೆ ವಹಿಸುವಂತೆ ಪಾಂಡವಪುರ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರುಗಳಿಗೆ ಸೂಚನೆ ನೀಡಿದರು.
ಜೊತೆಗೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿ ನೀಡಿ, ಪುರಸಭೆ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಜವಾವ್ದಾರಿ ನೀಡಿ ವಿಶೇಷ ಆಹ್ವಾನ ನೀಡಬೇಕು ಎಂದರು.