ಬೆಂಗಳೂರು: ರಾಜ್ಯದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ೧೫,೪೨೮ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಮಿಕೊಂಡಿದ್ದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಧಿಸೂಚನೆಯಾಗಿ ಬಾಕಿ ಉಳಿದಿದ್ದ ೬೭೦ ಹುದ್ದೆಗಳೂ ಸೇರಿದಂತೆ ಒಟ್ಟು ೧೧,೫೧೨ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ವಿವಿಧ ಹಂತದಲ್ಲಿದೆ ಎಂದರು.
೨೦೨೩-೨೪ ನೇ ಸಾಲಿನಲ್ಲಿ ೫೪,೪೨೭ ಕೋಟಿ ವಿದೇಶಿ ಬಂಡವಾಳ ಹೂಡಿಕೆ ಬಂದಿದ್ದು, ದೇಶದಲ್ಲೇ ರಾಜ್ಯ ಮೂರನೇ ಸ್ಥಾನದಲ್ಲಿದೆ. ವಿವಿಧ ಉದ್ಯಮ ಸಂಸ್ಥೆಗಳೊಡನೆ ೧೩ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ೪೨,೯೧೫ ಕೋಟಿ ರೂ. ಹೂಡಿಕೆಯಾಗಿ ೨೨,೬೦೦ ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಏಕಗವಾಕ್ಷಿ ಅನುಮೋದನಾ ಸಮಿತಿಗಳಲ್ಲಿ ೫೯೧ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ೮೪,೨೩೨ ಕೋಟಿ ರೂ. ಬಂಡವಾಳ ಹೂಡಿಕೆಯಾಗಿ ೧,೫೬,೯೮೬ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ರಾಜ್ಯ ೧,೬೬,೫೪೫ ಮಿಲಿಯನ್ ಅಮೆರಿಕನ್ ಡಾಲರ್ ಮೂಲಕ ರಫ್ತು ಮಾಡಿ ದೇಶದಲ್ಲೇ ಮೊದಲನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.೫.೨೦ ರಷ್ಟು ಪ್ರಗತಿಯಾಗಿದೆ.ಸಂಪೂರ್ಣ ಕ್ಲೀನ್ ಮೊಬಿಲಿಟಿ ವಾಹನ ಮೌಲ್ಯ ಸರಪಳಿಯಲ್ಲಿ ೫೦ ಸಾವಿರ ಕೋಟಿ ಹೂಡಿಕೆ ಆಕರ್ಷಿಸುವ ೧ ಲಕ್ಷ ಉದ್ಯೋಗ ಸೃಷ್ಟಿಸುವ ಹೊಸ ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿಗಾಗಿ ೪೦ ಕೃಷಿ ನವೋದ್ಯಮಗಳಿಗೆ ಉತ್ತೇಜನ ನೀಡಲಾಗಿದೆ ಎಂದರು.