ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ

ದಾವಣಗೆರೆ: ಹೊಸದಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಕೂಡಲೇ ಆರಂಭಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಜಾತಿ ಗಣತಿಗೂ ರಾಜ್ಯದ ಸಮೀಕ್ಷೆಗೂ ವ್ಯತ್ಯಾಸವಿದೆ. ಕೇಂದ್ರದವರು ಈಗಾಗಲೇ 2027ಕ್ಕೆ ಸಮೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಅವರು ಮಾಡುವುದು ಜಾತಿಗಣತಿ ಅಷ್ಟೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವುದಾಗಿ ಎಲ್ಲಿಯೂ ಹೇಳಿಲ್ಲ. ಅವರು ಸಮೀಕ್ಷೆ ಮಾಡಲಿ ನಮ್ಮ ತಕರಾರಿಲ್ಲ. ನಮ್ಮದು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ, ಇದರಲ್ಲಿ ಜಾತಿಗಣತಿಯೂ ಸೇರಿರುತ್ತದೆ ಎಂದು ತಿಳಿಸಿದರು.
ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದಾಗ ಮಾತ್ರ ನಾವು ಸಾಮಾಜಿಕ ನ್ಯಾಯ ಕೊಡಲು ಸಾಧ್ಯ. ಆದ್ದರಿಂದ ಹೊಸದಾಗಿ ಸಮೀಕ್ಷೆ ಮಾಡುತ್ತಿದ್ದೇವೆ. ಈಗಾಗಲೇ ನಾವು ನಡೆಸಿದ ಸಮೀಕ್ಷೆಗೆ ಕೆಲವರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ಅದಕ್ಕಿಂತ ಮುಖ್ಯವಾಗಿ ಸೆಕ್ಷನ್ 11ರ ಪ್ರಕಾರ ಯಾವುದೇ ಸಮೀಕ್ಷೆ ಮಾಡಿ 10 ವರ್ಷಗಳು ಕಳೆದಿದ್ದರೆ ಹೊಸದಾಗಿ ಸಮೀಕ್ಷೆ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.