ಕಾರವಾರ: ನಾನು ಯಾವುದೇ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಹೈಕಮಾಂಡ್‌ನಿಂದ ನೋಟಿಸ್ ಬಂದಿದ್ದು, ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ವಾಪಸ್ ಕಳುಹಿಸುತ್ತೇನೆ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ನೋಟಿಸ್ ಮಂಗಳವಾರ ರಾತ್ರಿ ನನಗೆ ಬಂದು ತಲುಪಿದೆ. ಅವರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಅವರು ಕೊಟ್ಟಂತಹ ಕ್ರಮದಲ್ಲಿಯೇ ನೀಡಿ ವಾಪಸ್ ಕಳುಹಿಸುತ್ತೇನೆ. ನಾವು ಯಾವುದೇ ಅಪರಾಧವನ್ನು ಮಾಡಿಲ್ಲ. ನಾವು ಯಾವುದೇ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಆದರೆ ಪರವಾಗಿ ಕೆಲಸ ಮಾಡದೆ ಇರಬಹುದು. ಅದಕ್ಕೆ ಹಲವಾರು ಕಾರಣಗಳು ಇದೆ. ನಾವೇನು ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿಲ್ಲ ಅಥವಾ ಯಾವುದೇ ಪಕ್ಷದ ವಿರುದ್ಧ ಹೇಳಿಕೆ ಕೂಡ ನೀಡಿಲ್ಲ ಎಂದು ಹೇಳಿದರು.
ಪಕ್ಷದಿಂದ ಆದ ಅನ್ಯಾಯದ ಬಗ್ಗೆ ಕೇಳಿದಾಗ ಪತ್ರದ ಮೂಲಕವೇ ತಿಳಿಸಿದ್ದೇನೆ. ಈ ಪರಿಸ್ಥಿಗೆ ಆ ನೋವುಗಳೇ ಕಾರಣ. ಯಾರು ಇದಕ್ಕೆ ಪ್ರಚೋದನೆ ನೀಡಿದ್ದಾರೋ ಆ ನಾಯಕರಿಗೆ ಏನೂ ಮಾಡಿಲ್ಲ. ಇವರು ಪಕ್ಷದ ಅಧ್ಯಕ್ಷರಿಗೆ, ನಾಯಕರಿಗೆ ಎಲ್ಲ ರೀತಿಯಿಂದಲೂ ಬೈದರು. ಆದರೆ ಅವರ ಮೇಲೆ ಏನು ಕ್ರಮವಾಗಿಲ್ಲ. ರೇಣುಕಾಚಾರ್ಯ ಅವರು ಯಾರನ್ನೊ ಗೌರವಿಸಬೇಕು. ಯಾರನ್ನೊ ಬದುಕಿಸಬೇಕು ಎಂದು ರಸ್ತೆ ಮೇಲೆ ಬೈದಾಡಿದರು. ಅವರ ಮೇಲೆ ಯಾವುದೇ ಕ್ರಮವಾಗಿಲ್ಲ. ಜೈಕಾರ ಹಾಕುವವರೇ ಬೇರೆ, ಜಿಲೆಬಿ ತಿನ್ನುವವರೇ ಬೇರೆ. ಅವರೆಲ್ಲರು ಜಿಲೆಬಿ ತಿನ್ನುತ್ತಲೇ ಇದ್ದಾರೆ. ಜೈಲಿಗೆ ಹೋಗುವವರು ಹೋಗುತ್ತಲೇ ಇರುವುದು ಇವತ್ತಿನ ಸ್ಥಿತಿಯಾಗಿದೆ ಎಂದು ಟೀಕಿಸಿದರು.
ಯತ್ನಾಳ್ ಕುರಿತ ಪ್ರಶ್ನೆಗೆ, ಬೇರೆಯವರ ಬಗ್ಗೆ ನಾನು ಮಾತನಾಡುವುದಿಲ್ಲ. ವಾಸ್ತವ ಎಲ್ಲರಿಗೂ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು.