ಉಡುಪಿ: ಹೆಜ್ಜೇನು ಕಡಿದ ಪರಿಣಾಮ 40ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನಗರದ ವಳಕಾಡು ಶಾಲಾ ಆವರಣದಲ್ಲಿ ಮಂಗಳವಾರ ಸಂಭವಿಸಿದೆ.
ಅಪರಾಹ್ನ 3.30ರ ಸುಮಾರಿಗೆ ಶಾಲಾ ಆವರಣದಲ್ಲಿ ಆಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಓರ್ವ ಕಟ್ಟಡದಲ್ಲಿದ್ದ ಜೇನುಗೂಡಿಗೆ ಕಲ್ಲು ಎಸೆದಿದ್ದ ಎನ್ನಲಾಗಿದೆ. ಅದರಿಂದ ಕೆರಳಿದ ಜೇನು ನೊಣಗಳು ಅಲ್ಲಿದ್ದ ಮಕ್ಕಳ ಮೇಲೆ ದಾಳಿ ನಡೆಸಿದ್ದು, ಮಕ್ಕಳು ಬೊಬ್ಬೆ ಹಾಕಿ ಓಡಿ ಬಂದರು.
ಕೂಡಲೇ ಶಿಕ್ಷಕರು, ಪೋಷಕರು ಘಾಸಿಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದರು. ಘಾಸಿಗೊಂಡ 41 ವಿದ್ಯಾರ್ಥಿಗಳಿಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಅವರಲ್ಲಿ ಮೂವರು ಮಕ್ಕಳನ್ನು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿದೆ. ಓರ್ವ ಪೋಷಕ ಕೂಡಾ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಮಕ್ಕಳು ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ.