ಹುಸಿ ಬಾಂಬ್ ಬೆದರಿಕೆ

ಪಣಜಿ: ಗೋವಾದ ಮಾಪ್ಸಾದಲ್ಲಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ನಂತರ ಅಧಿಕಾರಿಗಳು ಮತ್ತು ಉದ್ಯೋಗಿಗಳಲ್ಲಿ ಭಯಭೀತರಾದ ಘಟನೆ ನಡೆದಿದೆ. ಆದರೆ, ತನಿಖೆಯ ನಂತರ, ಅದು ಕೇವಲ ಬೆದರಿಕೆಯ ಹುಸಿ ಕರೆ ಎಂದು ತಿಳಿದುಬಂದಿದೆ. ಮಾಪ್ಸಾ ಪೊಲೀಸರಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಹೆಚ್ಚುವರಿ ಜಿಲ್ಲಾಧಿಕಾರಿ ಪುಂಡಲೀಕ ಖೋರ್ಜುವೇಕರ್ ಅವರ ಕಚೇರಿ ಆವರಣದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಿಸುವುದಾಗಿ ಬೆದರಿಕೆಯ ಈಮೇಲ್ ಬಂದಿತ್ತು.
ಬೆದರಿಕೆಗೆ ಹೆದರಿದ ಖೋರ್ಜುವೇಕರ್ ತಕ್ಷಣವೇ ಮಾಪುಸಾ ಪೊಲೀಸರಿಗೆ ಘಟನೆಯ ಬಗ್ಗೆ ವರದಿ ಮಾಡಿದರು. ಪೊಲೀಸರು ತಕ್ಷಣವೇ ಭದ್ರತಾ ಪಡೆಗಳ ಮೂಲಕ ಕ್ರಮ ಕೈಗೊಂಡರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಂಡವು ತಕ್ಷಣವೇ ಮಾಪ್ಸಾದ ಸರ್ಕಾರಿ ಸಂಕೀರ್ಣಕ್ಕೆ ಧಾವಿಸಿತು.
ಬಾಂಬ್ ನಿಷ್ಕ್ರಿಯ ತಜ್ಞರು ತರಬೇತಿ ಪಡೆದ ಸ್ನಿಫರ್ ನಾಯಿಗಳ ಸಹಾಯದಿಂದ ಪ್ರದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಅಧಿಕಾರಿಗಳು ಇಮೇಲ್ ನಕಲಿ ಎಂದು ಘೋಷಿಸಿದರು.