ಹುಬ್ಬಳ್ಳಿ: ಸರ್ಕಾರದ ನಾಯಕತ್ವ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇತ್ಯಾದಿ ಆಂತರಿಕ ವಿಚಾರಗಳನ್ನು ಮಾತನಾಡಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶನಿವಾರ ಇಲ್ಲಿ ಸ್ವಪಕ್ಷೀಯರಿಗೆ ತಾಕೀತು ಮಾಡಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ನಾಯಕತ್ವ ಎಐಸಿಸಿ ತೀರ್ಮಾನಕ್ಕೆ ಬಿಟ್ಟಿದ್ದು ಎಂದು ಪುನರುಚ್ಚರಿಸಿದರು. ಒಂದು ಬಣದ ಶಾಸಕರ ವಿದೇಶ ಪ್ರವಾಸದ ವಿಷಯ ಮತ್ತು ಇನ್ನೂ ಮುಂದುವರಿದಿರುವ ನಾಯಕತ್ವ ಬದಲಾವಣೆ ಮಾತುಗಳ ಬಗ್ಗೆ ಪತ್ರಕರ್ತರು ಕೇಳಿದಾಗ ಈ ಎಚ್ಚರಿಕೆ ರವಾನಿಸಿದರು.
`ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಎಲ್ಲರೂ ಬಾಯಿ ಮುಚ್ಚಿಕೊಂಡು ತಮ್ಮ ತಮ್ಮ ಕೆಲಸಗಳನ್ನು ಮಾಡುವಂತೆ ಸೂಚಿಸಿದ್ದಾರೆ. ಆದಾಗ್ಯೂ ಮಾತುಗಳು ಮುಂದುವರಿದರೆ ಸಂಬಂಧಿಸಿದವರ ರಾಜಕೀಯ ಭವಿಷ್ಯವೇ ಹಾಳಾಗುತ್ತದೆ’ ಎಂದು ಗುಡುಗಿದರು.