ಹುಲಿಕಲ್ ನಟರಾಜ್‌ಗೆ ಹೆದರಿದ ಆ ಅಗೋಚರ ಶಕ್ತಿ

0
29

ಪ್ರೇತ ಬಾಧೆ ಇದೆ ಎಂದು ಸುದ್ದಿ ಹಬ್ಬಿಸಿ ಇಡೀ ಸುದ್ದಿ ಮಾಧ್ಯಮಗಳಿಗೆ ಆಹಾರ ನೀಡಿದ್ದ ಮಾಲಾಡಿ ಉಮೇಶ್ ಶೆಟ್ಟಿ ಈಗ ಮಾಯ

ಬೆಳ್ತಂಗಡಿ : ಇಲ್ಲಿಯ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆಯಲ್ಲಿ ಪ್ರೇತ ಬಾಧೆ ಇದೆ ಎಂದು ನಿರಂತರವಾಗಿ ಊರಲ್ಲಿ ಸುಳ್ಳು ಸುದ್ದಿ ಹರಡಿ ನಾಗರೀಕರಲ್ಲಿ ಭಯದ ವಾತಾವರಣ ಸೃಷ್ಟಿಸಿ ಜನರಲ್ಲಿ ಆತಂಕ ಮೂಡಿಸಿದ ಮಾಲಾಡಿ ಉಮೇಶ್ ಶೆಟ್ಟಿಯ ಬಣ್ಣ ಇದೀಗ ಬಯಲಾಗಿದೆ.
ಕೆಲವು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯಲ್ಲಿ ವಾಸ್ತವ್ಯದ ಮನೆಯಲ್ಲಿ ಪ್ರೇತ ಬಾಧೆ ಎಂದು ಟಿವಿ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಿ ಮನೆ ಮಾತಾಗಿದ್ದ ಉಮೇಶ ಶೆಟ್ಟಿ ಎಂಬಾತನ ಅಸಲಿಯತ್ತು ಬಯಲಾಗಿದೆ.
ಈ ವಿಷಯದಲ್ಲಿ ಬೆಂಗಳೂರಿನ ಖ್ಯಾತ ಮನಶಾಸ್ತ್ರಜ್ಞರು ಡಾ. ಹುಲಿಕಲ್ ನಟರಾಜರು ಪ್ರೇತ ಬಾಧೆ ಇರುವ ಮನೆಗೆ ಭಾನುವಾರದ ದಿನ ಆಗಮಿಸಲಿದ್ದರು. ಆದರೆ ಉಮೇಶ ಶೆಟ್ಟಿ ಮಾಲಾಡಿ ಎಂಬಾತ ಇದೀಗ ಎಲ್ಲಿ ತನ್ನ ಬಣ್ಣ ಬಯಲಾಗುತ್ತದೋ ಎಂದು ಹೆದರಿ ಮಾದ್ಯಮದವರೊಬ್ಬರ ಮೂಲಕ ಕರೆ ಮಾಡಿಸಿ ತನ್ನ ಹೆಂಡತಿ ಮಕ್ಕಳಲ್ಲಿ ಮಾತಾಡಿಸಿ ಹುಲಿಕಲ್ ನಟರಾಜ್ ಬರುವುದನ್ನು ತಡೆಯುವುದರಲ್ಲಿ ಯಶಸ್ವಿಯಾಗಿದ್ದಾನೆ. ಹುಲಿಕಲ್ ನಟರಾಜರೊಂದಿಗೆ ಉಮೇಶನ ಹೆಂಡತಿ ಮತ್ತು ಮಗಳು ಫೋನ್ ಕರೆ ಮಾಡಿ ಸರ್ ದಯವಿಟ್ಟು ನೀವು ಬರಬೇಡಿ. ಇಲ್ಲಿ ಯಾವುದೇ ಬೂತ ಪ್ರೇತ ಇಲ್ಲ. ನಾವು ಈಗ ನೆಮ್ಮದಿಯಿಂದ ಇದ್ದೇವೆ. ನೀವು ಬಂದರೂ ನಾವು ಸಿಗುವುದಿಲ್ಲ. ನಾವು ಮಂಗಳೂರಿಗೆ ಮದುವೆಗೆ ಹೋಗುತ್ತಿದ್ದೇವೆ. ಒಂದು ವಾರ ಕಾಲ ಊರಲ್ಲಿ ನಾವು ಇರೋದಿಲ್ಲ, ಈಗ ಪ್ರೇತ ಬಾಧೆ ಇಲ್ಲ, ನಾವು ಸುಳ್ಳು ಹೇಳಿ ನಂಬಿಸಿದೆವು. ಇದ್ದಕ್ಕಿದ್ದಂತೆ ಬಟ್ಟೆಗೆ ಬೆಂಕಿ ಹಚ್ಚಿಕೊಳ್ಳುವುದು ವಿಭೂತಿ ಬೀಳುವುದು, ಪಾತ್ರೆ ಚೆಲ್ಲಾಪಿಲ್ಲಿಯಾಗಿ ಬೀಳುವುದು ಮತ್ತು ಬಂಗಾರದ ಚೈನ್ ಕಳೆದು ಹೋಗಿದ್ದು ಎಂದೆಲ್ಲಾ ಸುಳ್ಳು ಹೇಳಿ ನಂಬಿಸಿದ್ದೆವು. ಅದೆಲ್ಲಾ ಸುಳ್ಳು ಮತ್ತೆ ಬಂಗಾರದ ಚೈನ್ ಕೂಡ ಸಿಕ್ಕಿತು. ಆದುದರಿಂದ ನೀವು ದಯವಿಟ್ಟು ಬರುವುದು ಬೇಡ ಎಂದು ಅಂಗಾಲಾಚಿ ಬೇಡಿಕೊಂಡಿದ್ದಾರೆ . ಅವರ ವಿನಂತಿಯಂತೆ ಹುಲಿಕಲ್ ನಟರಾಜ್ ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಹುಲಿಕಲ್ ನಟರಾಜರಿಂದ ಮಾಧ್ಯಮಗಳಿಗೆ ಮನವಿ : ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿರುವ ಹುಲಿಕಲ್ ನಟರಾಜರು ರಾಜ್ಯದ ಎಲ್ಲಾ ಟೀವಿ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಯಾವುದೇ ಊರುಗಳಲ್ಲಿ ಅಥವಾ ಮನೆಗಳಲ್ಲಾಗಲಿ ಇಂತಹ ಘಟನೆಗಳು ನಡೆದಾಗ ಅತಿಮಾನುಷ ಶಕ್ತಿ ಎನ್ನುವುದು ಯಾವುದೂ ಇಲ್ಲ. ಅಂತಹ ಕಡೆಗಳಲ್ಲಿ ನೊಂದಿರುವ ಅಥವಾ ಆ ಮನೆಯೊಳಗಿನ ಅನ್ಯಾಯಕ್ಕೊಳಗಾಗಿರುವ ಅಥವಾ ವಿಕೃತ ಮನಸ್ಸಿನ ಒಂದು ವ್ಯಕ್ತಿ ಆ ರೀತಿ ಮಾಡಿರುತ್ತದೆ. ಅದಕ್ಕೆ ಪರಿಹಾರ ಬೇರೆ ಬೇರೆ ರೀತಿ ಮಾಡುತ್ತಿರುತ್ತಾರೆ. ಈ ರೀತಿಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಆ ಮನೆಯ ಅಪ್ರಾಪ್ತ ಮಕ್ಕಳನ್ನು ಬೀದಿಗೆ ತಂದು ನಿಲ್ಲಿಸುವುದು ಸರಿಯಲ್ಲ. ಟಿವಿ ಮಾಧ್ಯಮಗಳು ಅಂತಹ ಸಂದರ್ಭದಲ್ಲಿ ಇಹಪರಗಳನ್ನು ಯೋಚನೆ ಮಾಡದೆ ಏಕಾಏಕಿ ನಮ್ಮಲ್ಲೇ ಮೊದಲು ಎಂದು ಮಕ್ಕಳನ್ನು ತೋರಿಸುವುದನ್ನು ನಿಲ್ಲಿಸಬೇಕು. ಅಕಸ್ಮಾತ್ ತೋರಿಸಿದರೂ ನಾಳೆ ಆ ಮಕ್ಕಳಿಗೆ ಅವಮಾನ ಆಗುವ ಸಾಧ್ಯತೆ ಇರುವುದು ಖಂಡಿತ. ಮಕ್ಕಳು ತಪ್ಪು ಮಾಡಿರಬಹುದು ಅಥವಾ ತಮ್ಮ ತಂದೆ ಹೇಳಿದ ಹಾಗೆ ಹೇಳಿರಬಹುದು. ಆದರೆ ಆ ಬಾಲಕಿ ಈಗ ಪರಿತಪಿಸುತ್ತಿದ್ದಾಳೆ. ನಾವು ಸುಳ್ಳು ಹೇಳಿದ್ದೇವೆ ನಾಳೆ ನಾನು ಹೇಗೆ ಶಾಲೆಗೆ ಹೋಗಲಿ ಎಂದು ನೊಂದಿದ್ದಾಳೆ. ಆದುದರಿಂದ ಟಿವಿ ಮಾಧ್ಯಮದವರು ಅಥವಾ ಬೇರೆ ಯಾವುದೇ ಮಾಧ್ಯಮದವರು ಇಲ್ಲಸಲ್ಲದ ಊಹಾಪೋಹ ಸುಳ್ಳು ಸುದ್ದಿಯನ್ನು ಬಿತ್ತರಿಸಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಟಿವಿಯಲ್ಲಿ ಮುಖ ತೋರಿಸಿ ಸಮಾಜದಿಂದ ದೂರ ಮಾಡುವುದನ್ನು ದಯವಿಟ್ಟು ನಿಲ್ಲಿಸಿ ಎಂಬ ಮನವಿಯೊಂದಿಗೆ ಎಲ್ಲಾ ಮಾಧ್ಯಮ ಮಿತ್ರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ‌‌.

Previous articleಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು ಸಂಚಾರ ಶೀಘ್ರ ಆರಂಭ
Next articleಅವಹೇಳನಕಾರಿ ಪೋಸ್ಟ್ ವಿಚಾರ: ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ