ಹುಬ್ಬಳ್ಳಿ – ಧಾರವಾಡದಲ್ಲಿ ಮೊಬೈಲ್ ಸಿಮ್ ವ್ಯಾಪಕ ಮಾರಾಟ , ಸಮಾಜ ಘಾತುಕ ಶಕ್ತಿಗಳು ಖರೀದಿಸಿದ ಅನುಮಾನ

0
34

ಹುಬ್ಬಳ್ಳಿ: ಹುಬ್ಬಳ್ಳಿ – ಧಾರವಾಡದಲ್ಲಿ ಕೆಲ ದಿನಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೊಬೈಲ್ ಸಿಮ್ ಮಾರಾಟ ಆಗಿವೆ. ಸಮಾಜ ಘಾತುಕ, ದೇಶ ವಿರೋಧಿ ಶಕ್ತಿಗಳು ಖರೀದಿಸಿರುವ ಅನುಮಾನವಿದ್ದು, ಕೂಡಲೇ ಗೃಹ ಇಲಾಖೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದ ಆಸುಪಾಸಿನಲ್ಲಿಯೇ ಈ ರೀತಿ ವ್ಯಾಪಕ ಪ್ರಮಾಣದಲ್ಲಿ ಮೊಬೈಲ್ ಸಿಮ್ ಮಾರಾಟ ಆದ ಬಗ್ಗೆ ಮಾಹಿತಿ ಇದೆ. ಇದೇ ರೀತಿ ಬೇರೆ ನಗರ, ಊರುಗಳಲ್ಲೂ ಆಗಿರಬಹುದು.ಕೂಡಲೇ ಗೃಹ ಇಲಾಖೆ ತನಿಖೆ ನಡೆಸಬೇಕು. ಸಿಮ್ ಯಾರು ಖರೀದಿಸಿದ್ದಾರೆ. ಏನು ದಾಖಲೆ ಕೊಟ್ಟಿದ್ದಾರೆ. ಖರೀದಿಸಿದ ವ್ಯಕ್ತಿ ಎಲ್ಲಿಯವರು ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು. ಪಾಕಿಸ್ತಾನದೊಂದಿಗಿನ ಯುದ್ಧದ ಕಾರ್ಮೋಡದ ನಡುವೆಯೇ ಈ ರೀತಿ ಸಿಮ್ ಗಳ ಮಾರಾಟ ನಡೆದಿರುವುದು ದೇಶ ವಿರೋಧಿ ಶಕ್ತಿಗಳ ಕೈಗೆ ಸಿಮ್ ಲಭಿಸಿದವೆ? ಎಂಬ ಅನುಮಾನ ಬಂದಿದೆ.ಅನಾಹುತ ಘಟಿಸುವ ಮುನ್ನ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಅಷ್ಟೇ ಅಲ್ಲದೇ, ಹುಬ್ಬಳ್ಳಿ – ಧಾರವಾಡದಲ್ಲಿನ ಮದರಸಾ, ಮಸೀದಿಗಳಿಗೆ ಅನುಮಾನಾಸ್ಪದ ವ್ಯಕ್ತಿಗಳು ಎಂದರೆ ನಮ್ಮೂರಿನ, ನಮ್ಮ ದೇಶದವರಲ್ಲದ ರೀತಿಯ ವ್ಯಕ್ತಿಗಳು ಸಂಚರಿಸಿದ ಬಗ್ಗೆ ಜಾಗೃತ ನಾಗರಿಕರು ನನಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಮಹಾನಗರ ಪೊಲೀಸ್ ಆಯುಕ್ತರಿಗೆ ನೀಡಿ ಪರಿಶೀಲನೆಗೆ ಪತ್ರ ಬರೆದಿದ್ದರೂ ಏನೂ ಕ್ರಮ ಕೈಗೊಂಡಿಲ್ಲ. ಏನಾದರೂ ಅನಾಹುತಗಳು ಆದರೆ ಯಾರು ಹೊಣೆ? ಕಮೀಶನರ್ ಗಾಂಜಾ ದಂಧೆಕೋರರು, ಮಟ್ಕಾ ದಂಧೆಕೋರರು, ಬಡ್ಡಿ ಕುಳ, ರೌಡಿಗಳಿಗೆ ಹೆದರಿಸಿ ಬೆದರಿಸಿ ಹಣ ವಸೂಲಿ ದಂಧೆಗೆ ಇಲಾಖೆ ಅಧಿಕಾರಿಗಳನ್ನು ಇಳಿಸಿದ್ದಾರೆ. ಕಮೀಶನರ್ ನಡೆಯ ಬಗ್ಗೆ ಗೃಹ ಸಚಿವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

Previous articleಸಾಧನಾ ಸಮಾವೇಶವೋ ಅಥವಾ ಬೀಳ್ಕೊಡುಗೆ ಸಮಾರಂಭವೋ?
Next articleಬಮುಲ್‌ ನಿರ್ದೇಶಕರಾಗಿ ಡಿ. ಕೆ. ಸುರೇಶ್ ಅವಿರೋಧ ಆಯ್ಕೆ