ಅಥಣಿ(ಗ್ರಾಮೀಣ): ತಾಲೂಕಿನ ಉಗಾರಬುದ್ರಕ್ ಗ್ರಾಮದ ಶ್ರೀ ವಿಠ್ಠಲ ಮಂದಿರದ ಸಭಾಭವನದಲ್ಲಿ ಉಗಾರ ಗ್ರಾಮದ ಧಪೇದಾರ ಎಂಬ ಮುಸ್ಲಿಂ ಕುಟುಂಬದ ವಿವಾಹ ಸಮಾರಂಭವು ದಿ.೧೯ರಂದು ಸಂಪನ್ನಗೊಂಡಿತು. ದಫೇದಾರ ಕುಟುಂಬದ ಮದುವೆ ಸಮಾರಂಭ ಭಾವೈಕ್ಯತೆ ಸಾರಿದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ಗ್ರಾಮವು ಯಾವಾಗಲೂ ಭಾವೈಕ್ಯತೆಗೆ ಉದಾಹರಣೆಯಾಗುತ್ತಾ ಬಂದಿದ್ದು, ಇತ್ತೀಚಿಗೆ ಮುಸ್ಲಿಂ ಬಾಂಧವರು ಹಿಂದೂಗಳೊಂದಿಗೆ ಸೇರಿ ಗಣೇಶ ಚತುರ್ಥಿಯಲ್ಲಿ ಗಣೇಶನ್ನು ಪ್ರತಿಷ್ಠಾಪಿಸಿದ್ದರು. ಈಗ ಗ್ರಾಮದ ಮರಾಠಾ ಸಮಾಜ ಬಾಂಧವರು ಶ್ರೀ ವಿಠ್ಠಲ ಮಂದರದಲ್ಲಿ ದಫೇದಾರ ಕುಟುಂಬದ ಮದುವೆ ಸಮಾರಂಭಕ್ಕೆ ಸ್ಥಳ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ಉಗಾರ ಗ್ರಾಮದ ಅಬ್ಬಾಸ ದಫೇದಾರ, ಮಾಸಾಯಿ ದಫೆದಾರ ದಂಪತಿಗಳ ದ್ವಿತೀಯ ಸುಪುತ್ರ ಸಲ್ಮಾನ ಮತ್ತು ಶಿರೀನ್ ಅವರ ಶುಭ ವಿವಾಹವು ಇಲ್ಲಿ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು. ಹಿಂದೂ ಮುಸ್ಲಿಂ ಸಮಾಜದವರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ದಿಲೀಪ ಕಾಟಕರ, ಲಕ್ಷ್ಮಣ ಜಾಧವ, ಶೀತಲ ಕುಂಬಾರ, ತಮ್ಮಾ ಜಾಧವ, ಬಾಳು ಕದಮ, ಸಂಭಾಜಿ ಕದಮ, ಗುಲಾಬ ನೇಜಕರ, ಎನ್.ಎಂ. ಕುಂಬಾರ, ಬಿರಾದಾರ, ಪಿ.ವ್ಹಿ. ಜೋಶಿ, ಪ್ರಕಾಶ ವಡಗಾಂವೆ, ನೂರಸಾಬ ಬಿಜ್ಜರಿ, ಮುನಾಫ್ ಚೌಧರಿ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.