ಮಂಗಳೂರು: ಉಸಿರು ಇರುವವರೆಗೆ ಹಿಂದುತ್ವಕ್ಕೆ ಹೋರಾಟ ಮಾಡುತ್ತೇನೆ ಎನ್ನುತ್ತಿದ್ದ, ಆದರೆ ಅವನ ಉಸಿರನ್ನೆ ನಿಲ್ಲಿಸಿ ಬಿಟ್ಟರು ಎಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಬೆಳಗ್ಗೆ ಮದುವೆಯ ಗಡಿಬಿಡಿಯಲ್ಲಿದ್ದೇವು. ಆದ್ದರಿಂದ ಅವನಿಗೆ ಫೋನ್ ಮಾಡಲು ಆಗಲಿಲ್ಲ, ರಾತ್ರಿ ಫೋನ್ ಮಾಡಿದಾಗ ಕಾಲ್ ಸಿಗುತ್ತಿರಲಿಲ್ಲ. ನನ್ನ ಮಗ ಉಸಿರು ಇರುವವರೆಗೆ ಹಿಂದುತ್ವಕ್ಕೆ ಹೋರಾಟ ಮಾಡುತ್ತೇನೆ ಎನ್ನುತ್ತಿದ್ದ, ಆದರೆ ಅವನ ಉಸಿರನ್ನೆ ನಿಲ್ಲಿಸಿ ಬಿಟ್ಟರು, ಮಗನ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಹಿಂದೂಗಳು ಹೆದರಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾವು ಶೇ. 85ರಷ್ಟು ಹಿಂದೂಗಳಿದ್ದರೂ ಅವರಿಗೆ ಹೆದರಿ ಬದುಕಬೇಕಾಗಿದೆ, ಹತ್ಯೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸುಹಾಸ್ ತಂದೆ ಮೋಹನ್ ಶೆಟ್ಟಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ತನ್ನ ಮಗ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಬೆಳ್ತಂಗಡಿಯಲ್ಲಿ ತನ್ನ ತಮ್ಮನ ಮಗಳ ಮದುವೆ ಇತ್ತು, ಏ. 29 ಮತ್ತು 30ರಂದು ಅವನು ಅಲ್ಲಿಯೇ ಇದ್ದ, ನಂತರ ಮೇ 1ರಂದು ಬಜ್ಪೆಗೆ ಯಾವುದೋ ಕೆಲಸದ ನಿಮಿತ್ತ ಹೋಗಿದ್ದ. ಸುಹಾಸ್ ಹತ್ಯೆಯಾದ ಸುದ್ದಿ ಅವರಿಗೆ ನಿನ್ನೆ ರಾತ್ರಿ 9 ಗಂಟೆಗೆ ಗೊತ್ತಾಗಿದೆ ಎಂದಿದ್ದಾರೆ.