ಹಾವೇರಿಯ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ

ಹಾವೇರಿ: ಇಲ್ಲಿನ ಹಾವೇರಿ ಹಾಲು ಒಕ್ಕೂಟ ಕೊನೆಗೂ ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ ಕೊಟ್ಟಿದ್ದು,  ಏಪ್ರಿಲ್ 1 ರಿಂದಲೇ ಅನ್ವಯ ಆಗುವಂತೆ ಪ್ರತಿ ಲೀ., ಹಾಲಿಗೆ 2.50ರೂ., ಹೆಚ್ಚಿಸಲು ನಿರ್ಣಯ ಕೈಗೊಂಡಿದೆ.

ಸರ್ಕಾರ ಪ್ರತಿ ಲೀ., ಹಾಲಿಗೆ 4 ರೂ., ಹೆಚ್ಚಿಸಿ ನೇರವಾಗಿ ರೈತರಿಗೆ ವರ್ಗಾವಣೆ ಮಾಡುವಂತೆ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಹಾವೇರಿ ಹಾಲು ಒಕ್ಕೂಟ 20 ಕೋಟಿ ನಷ್ಟದ ನೆಪ ಹೇಳಿ ಪ್ರತಿ ಲೀ., ಹಾಲಿಗೆ 3.50 ರೂ., ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಈ ಕುರಿತು ಸಂಯುಕ್ತ ಕರ್ನಾಟಕ ಮೊದಲ ಬಾರಿಗೆ ‘ಹಾವೇರಿ ರೈತರಿಗೆ ಯುಗಾದಿ ಕಹಿ..! ಎಂಬ ವರದಿ ಪ್ರಕಟಿಸಿತ್ತು. ತಕ್ಷಣ ಎಚ್ಚೆತ್ತುಕೊಂಡಿದ್ದ ಕೆಎಂಎಫ್ ಎಂಡಿ ಹಾಲಿನ ದರ ಕಡಿತಗೊಳಿಸಿರುವುದಕ್ಕೆ ಸಮಂಜಸವಾದ ಮಾಹಿತಿ ನೀಡಬೇಕು ಹಾಗೂ ಹಾಲಿನ ದರವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿ ವರದಿ ನೀಡುವಂತೆ ಪತ್ರ ಬರೆದಿತ್ತು. ಬಳಿಕ ರೈತರು ಹಾಲಿನ ದರ ಹೆಚ್ಚಿಸುವಂತೆ ಒಕ್ಕೂಟದ ಕೇಂದ್ರ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ದರು. ಹೀಗಾಗಿ ಕೊನೆಗೂ ಹಾವೇರಿ ಹಾಲು ಒಕ್ಕೂಟ ಮಾ. 28ರಂದು ಹೊರಡಿಸಿದ್ದ ಹಾಲು ದರ ಕಡಿತದ ಆದೇಶವನ್ನು ಹಿಂಪಡೆದು ಏಪ್ರಿಲ್ 1 ರಿಂದಲೇ ಅನ್ವಯ ಆಗುವಂತೆ 2.50 ರೂ.,ಹೆಚ್ಚಿಸಿ ಆದೇಶ ಹೊರಡಿಸಿದ್ದು, ಪ್ರತಿ ಲೀಟರ್ ಹಾಲಿಗೆ 34.05ದರ ಸಿಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ತಿಳಿಸಿದ್ದಾರೆ.

ರೈತರಿಗೆ ಮನವಿ ಒಕ್ಕೂಟ ಕಷ್ಟದ ಪರಿಸ್ಥಿತಿಯಲ್ಲೂ 2.50ರೂ.,  ಹೆಚ್ಚಿಸಿದೆ. ಒಕ್ಕೂಟ ರೈತರದ್ದೇ. ಎಲ್ಲ ರೈತರು ಹಾಲು ಉತ್ಪಾದಕರ ಸಂಘಗಳು ಸಹಕಾರ ಕೊಡಬೇಕು ಎಂದು  ಅಧ್ಯಕ್ಷರು ಮನವಿ ಮಾಡಿದ್ದಾರೆ.