ಹಾಲಿನ ದರ ಹೆಚ್ಚಳ, ರೈತರ ಹೆಸರಿನಲ್ಲಿ ಗ್ರಾಹಕರಿಗೆ ಬರೆ

0
121

ನವದೆಹಲಿ: ರಾಜ್ಯ ಸರ್ಕಾರ ರೈತರ ಹೆಸರಿನಲ್ಲಿ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದು ಎಲ್ಲಿರಿಗೂ ಗೊತ್ತಿರುವ ವಿಚಾರ ಇಂದು ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಒಂದು ವರ್ಷದಲ್ಲಿ ಎರಡು ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಈಗ ಕೆಇಆರ್‌ಸಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದು ಡಿಜಿಟಲ್ ಮೀಟರ್ ಅಳವಡಿಕೆಯ ಹಗರಣ ಮಾಡಿದ್ದಾರೆ. ಪ್ರತಿ ಮೀಟರ್ ನಿರ್ವಹಣೆಗೆ 5 ಸಾವಿರಕ್ಕಿಂತಲೂ ಹೆಚ್ಚಳ ಹೊರೆ ಹಾಕಿದ್ದಾರೆ. ಇದರಿಂದ ಪ್ರತಿಯೊಂದು ಕುಟುಂಬದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂದರು.
ಕಳೆದ ವರ್ಷ ಬಜೆಟ್ ಹೊರತಾಗಿಯೂ ಸುಮಾರು 40 ಸಾವಿರ ಕೋಟಿ ರೂ. ಹೆಚ್ಚಿಗೆ ತೆರಿಗೆ ಹಾಕಿದ್ದರು. ತಮ್ಮ ಸರ್ಕಾರದ ಆರ್ಥಿಕ ದಿವಾಳಿತನ ಮರೆಮಾಚಲು ರಾಜ್ಯದ ಜನತೆಯ ಮೇಲೆ ಹೊರ ಹಾಕುತ್ತಿದ್ದಾರೆ. ರಾಜ್ಯದ ಜನರು ಬೆಲೆ ಏರಿಕೆಯನ್ನು ನಿಲ್ಲಿಸಿ ಎಂದು ಹೇಳಬೇಕಿದೆ. ಹಾಲಿನ ದರ ಹೆಚ್ಚಳ ಮಾಡಿರುವುದನ್ನು ರೈತರಿಗೆ ನೀಡಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಯಾವತ್ತೂ ಹೆಚ್ಚಳ ಮಾಡಿರುವ ಹಾಲಿನ ಮೊತ್ತವನ್ನು ರೈತರಿಗೆ ನೀಡಿಲ್ಲ. ರೈತರ ಹೆಸರಿನಲ್ಲಿ ಗ್ರಾಹಕರಿಂದ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು
ರಾಜ್ಯ ಸರ್ಕಾರ ಕೆಎಂಎಫ್‌ನಲ್ಲಿ ಆಗುತ್ತಿರುವ ಅನಗತ್ಯ ಸೋರಿಕೆಯನ್ನು ತಡೆಯುತ್ತಿಲ್ಲ. ಅಲ್ಲದೇ ಕೆಎಂಎಫ್ ಮೇಲಿಂದ ಮೇಲೆ ಹಾಲಿನ ದರ ಏರಿಕೆ ಮಾಡುತ್ತಿರುವುದರಿಂದ ಖಾಸಗಿ ಕಂಪನಿಗಳು ಪ್ರವೇಶ ಮಾಡಲು ಅವಕಾಶವಾಗುತ್ತಿದೆ. ಇದರಿಂದ ಪರೋಕ್ಷವಾಗಿ ಖಾಸಗಿಯವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತಿದೆ. ಕಾಂಗ್ರೆಸ್‌ನಿಂದ ಡಬಲ್ ದೋಖಾ ಆಗುತ್ತಿದೆ ಎಂದು ಆರೋಪಿಸಿದರು.
ಹಾಲು, ವಿದ್ಯುತ್ ದರದ ಜೊತೆಗೆ ಮೆಟ್ರೊ, ಬಸ್‌ ದರ ಎಲ್ಲವೂ ಹೆಚ್ಚಳ ಮಾಡಿದ್ದಾರೆ. ಪ್ರತಿ ದಿನ ಜನರ ಮೇಲೆ ತೆರಿಗೆ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಿರುವ ಸುದ್ದಿ ಕೇಳುತ್ತಿದ್ದೇವೆ. ಗ್ರಾಮೀಣ ಜನರಿಗೆ ಈ ಸರ್ಕಾರ ಒಂದು ಶಾಪವಾಗಿ ಪರಿಣಮಿಸಿದೆ. ಪ್ರತಿ ದಿನ ಬಡವರು ಬೆಳಿಗ್ಗೆ ಎದ್ದ ತಕ್ಷಣ ಯಾವ ತೆರಿಗೆ ಹೆಚ್ಚಳವಾಗಿದೆ ಎಂದು ನೋಡುವ ಪರಿಸ್ಥಿತಿ ಬಂದಿದೆ ಎಂದರು‌
ರಾಷ್ಟ್ರೀಯ ಹಣದುಬ್ಬರಕ್ಕಿಂತ ಕರ್ನಾಟಕದ ಹಣದುಬ್ಬರ ಹೆಚ್ಚಳವಿದೆ. ಇದೆಲ್ಲಾ ಗ್ಯಾರೆಂಟಿ ಕಾರಣದಿಂದ ಆಗುತ್ತಿದೆ. 1.5 ಲಕ್ಷ ಕೋಟಿ ರೂ. ಗ್ರಾರೆಂಟಿಗೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರವೂ ಮುಳಗುತ್ತಿದ್ದು, ಜನರನ್ನೂ ಮುಳುಗಿಸುತ್ತಿದ್ದಾರೆ. ಮೂರು ಬಜೆಟ್‌ನಲ್ಲಿ ಸಿದ್ದರಾಮಯ್ಯ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅವರು ಅಸಮರ್ಥ ಮುಖ್ಯಮಂತ್ರಿಯಾಗಿದ್ದು, ಈ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಜನರು ಈ ಸರ್ಕಾರವನ್ನು ಶೀಘ್ರವೇ ಕಿತ್ತೊಗೆಯಲಿದ್ದಾರೆ ಎಂದು ಹೇಳಿದರು.

Previous articleಯತ್ನಾಳ ಉಚ್ಚಾಟನೆ ಹಿಂಪಡೆಯಲು ಸ್ವಾಮೀಜಿ ಗಡುವು
Next articleಭಕ್ತರ ಮನೆಬಾಗಿಲಿಗೆ ದೇವರ e ಪ್ರಸಾದ