ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಅಮಾನವೀಯ ಕೃತ್ಯ ನಡೆದಿದೆ. ಇದು ಯಾರೇ ಮಾಡಿದ್ದರೂ ಅತ್ಯಂತ ಕ್ರೂರ. ಮೂಕ ಪ್ರಾಣಿಗಳಿಗೆ ಚಿತ್ರಹಿಂಸೆ ಕೊಡುವುದು ಮನುಷ್ಯತ್ವ ಅಲ್ಲ. ಈ ಕೃತ್ಯಕ್ಕೆ ಮನುಷ್ಯ-ಮನುಷ್ಯರ ನಡುವೆ ಇರುವ ವೈಮನಸ್ಯ ಕಾರಣವೇ ಹೊರತು ಪ್ರಾಣಿಗಳಲ್ಲ ಎಂಬುದು ಸ್ಪಷ್ಟ. ಹಿಂದೆ ಎಂದೂ ಈ ರೀತಿಯ ಕೃತ್ಯಗಳು ನಡೆದಿರಲಿಲ್ಲ. ಇಂಥ ಕೃತ್ಯಗಳ ಕೈಗೊಂಡವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಸಮಾಜದಲ್ಲಿ ಎಲ್ಲ ಕಡೆ ಹಲವು ರೀತಿಯ ವೈಷಮ್ಯಗಳು ಇರುತ್ತವೆ. ಅದಕ್ಕೆ ಮೂಕ ಪ್ರಾಣಿಗಳು ಕಾರಣವಾಗುವುದಿಲ್ಲ. ಆದರೆ ತನ್ನ ದ್ವೇಷಗಳನ್ನು ತೀರಿಸಿಕೊಳ್ಳಲು ಕೆಲವರು ಅವಿವೇಕಿಗಳು ಮೂಕ ಪ್ರಾಣಿಗಳಿಗೆ ತೊಂದರೆ ಕೊಟ್ಟು ವಿಕೃತ ಸಂತೋಷ ಅನುಭವಿಸುತ್ತಾರೆ. ಇಂಥವರನ್ನು ಹಿಡಿದು ಶಿಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯ. ಇಂಥ ಕೃತ್ಯ ಕೈಗೊಂಡವರು ಯಾವುದೇ ಸಮುದಾಯಕ್ಕೆ ಸೇರಿರಲಿ ಮೊದಲು ಆ ಸಮುದಾಯದವರು ಅವರನ್ನು ಹೊರಹಾಕಬೇಕು. ಅವರಿಗೆ ಬುದ್ಧಿ ಕಲಿಸುವುದು ಅಗತ್ಯ. ಹಿಂದಿನಿಂದಲೂ ಚಾಮರಾಜಪೇಟೆ ಸೂಕ್ಷ್ಮ ಪ್ರದೇಶವಾಗಿದ್ದರೂ ಈ ರೀತಿಯ ಘಟನೆಗಳು ನಡೆದಿರಲಿಲ್ಲ. ಘರ್ಷಣೆಗಳಾಗಿರುವುದು ನಿಜ. ಆದರೆ ಎಲ್ಲವು ತಣ್ಣಗಾಗಿ ಹೋಗುತ್ತಿದ್ದವು. ಬೆಂಗಳೂರು ನಗರದಲ್ಲಿ ಇಂಥ ಘಟನೆ ನಡೆದಿರುವುದು ಎಲ್ಲರೂ ತಲೆತಗ್ಗಿಸುವಂತಹದು. ಅದರಿಂದ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಖಂಡಿಸಿದ್ದಾರೆ. ಪೊಲೀಸರು ಕೂಡಲೇ ತಪ್ಪಿತಸ್ಥರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು.
ನಮ್ಮದು ಕೃಷಿ ಪ್ರಧಾನ ದೇಶ. ಇಲ್ಲಿ ಹಸು, ಎಮ್ಮೆ, ಕುರಿ, ಕೋಳಿ ಸೇರಿದಂತೆ ಎಲ್ಲ ಪ್ರಾಣಿಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ರೈತರಿಗೆ ಗೋವು ಎಂದರೆ ಪವಿತ್ರ. ಅದರಿಂದ ದಿನನಿತ್ಯದ ಆದಾಯವನ್ನು ರೈತ ಕಂಡುಕೊಳ್ಳುತ್ತಾನೆ. ಎಷ್ಟೋ ಗ್ರಾಮೀಣ ಕುಟುಂಬಗಳಲ್ಲಿ ಈ ಪ್ರಾಣಿಗಳು ಭಾವನಾತ್ಮಕ ಸಂಬಂಧ ಹೊಂದಿದೆ. ಹಿಂದೆ ಮಗಳ ಮದುವೆ ಮಾಡಿಕೊಟ್ಟರೆ ಆಕೆಯೊಂದಿಗೆ ಒಂದು ಗೋವನ್ನು ಕೊಟ್ಟು ಕಳುಹಿಸುತ್ತಿದ್ದರು. ಈ ರೀತಿ ತವರು ಮನೆಯ ಕೊಡುಗೆ ಎಂಬ ಅಭಿಮಾನ ಇರುತ್ತಿತ್ತು. ಈ ರೀತಿ ಪ್ರಾಣಿಗಳನ್ನು ಕಾಣುವ ಸಮಾಜದಲ್ಲಿ ಕೆಲವು ಕಿಡಿಗೇಡಿಗಳು ಮಾಡುವ ಕ್ರೂರ ಕೆಲಸ ಎಲ್ಲರನ್ನೂ ತಲೆತಗ್ಗಿಸುವಂತೆ ಮಾಡಿಬಿಡುತ್ತದೆ. ಮುಂದೆ ಎಂದೂ ಇಂಥ ಕೃತ್ಯ ನಡೆಯದಂತೆ ಎಚ್ಚರ ವಹಿಸುವುದು ಅಗತ್ಯ. ಪ್ರತಿ ಸಮಾಜದಲ್ಲೂ ದುಷ್ಟಶಕ್ತಿಗಳು ಹುಟ್ಟಿಕೊಳ್ಳುವುದು ಸಹಜ. ಆದರೆ ಅದನ್ನು ನಿಯಂತ್ರಿಸುವುದು ಆಯಾ ಸಮಾಜದ ಕೆಲಸ. ಇದೆಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ಕಾನೂನು ಮೂಲಕ ಗದಾಪ್ರಹಾರ ನಡೆಸಿ ದುಷ್ಟಶಕ್ತಿಗಳನ್ನು ದಮನ ಮಾಡಬೇಕು. ಉಗ್ರವಾದಿಗಳಿಗಿಂತ ಇವರು ಕ್ರೂರಿಗಳು. ಉಗ್ರವಾದಿಗಳು ಮನುಷ್ಯರ ಮೇಲೆ ಹಲ್ಲೆ ನಡೆಸುತ್ತಾರೆ. ಇವರು ಮೂಕ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡಿ ಸಂತಸಪಡುತ್ತಾರೆ ಎಂದರೆ ಇವರು ಕ್ರೂರಿಗಳು ಎಂಬುದರಲ್ಲಿ ಸಂದೇಹವಿಲ್ಲ. ಅದರಲ್ಲೂ ಗೋವು ಮನುಷ್ಯರ ಜತೆ ಬಾಳಿ ಬದುಕಿ ಎಲ್ಲವನ್ನೂ ತ್ಯಾಗ ಮಾಡುವ ಪ್ರಾಣಿ. ಅಂಥ ಪ್ರಾಣಿಯನ್ನು ಪುಣ್ಯಕೋಟಿ ಎಂದು ಕರೆಯುವುದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಅಂಥ ಪುಣ್ಯಕೋಟಿಗೆ ತೊಂದರೆ ಕೊಡುವವರು ನಿಜಕ್ಕೂ ರಾಕ್ಷಸರು. ಅವರಿಗೆ ಸೂಕ್ತ ಶಿಕ್ಷೆ ವಿಧಿಸುವುದು ಸರ್ಕಾರ ಮತ್ತು ನ್ಯಾಯಾಂಗದ ಕರ್ತವ್ಯವೂ ಹೌದು. ಸುದೈವದಿಂದ ಈ ವಿಕೃತ ಅಪರಾಧ ಬೇರೆಲ್ಲೂ ನಡೆದಿಲ್ಲ. ಮರುಕಳಿಸದೆ ಎಚ್ಚರ ವಹಿಸುವುದು ಅಗತ್ಯ. ಹಿಂದೆ ಬರಗಾಲ ಬಂತು ಎಂದರೆ ಬಡ ರೈತ ಜತೆ ಇರುತ್ತ ಇದ್ದದ್ದು ಒಂಟಿ ದನ-ಕರು ಎಂಬುದನ್ನು ಮರೆಯಬಾರದು. ಎಷ್ಟೋ ಬಾರಿ ರೈತರು ಕಣ್ಣೀರು ಸುರಿಸುತ್ತ ತಮ್ಮ ಪ್ರಾಣಿಗಳನ್ನು ಮಾರಿದ್ದುಂಟು. ಸರ್ಕಾರ ಈ ಪ್ರಾಣಿಗಳನ್ನು ಉಳಿಸಲು ಗೋಶಾಲೆಗಳನ್ನು ತೆರೆಯುತ್ತಿದ್ದವು. ಈಗಲೂ ಹಳ್ಳಿಯ ದನಕರುಗಳನ್ನು ಮಾರುವುದಿಕ್ಕೆ ಬಯಸುವುದಿಲ್ಲ. ಅವುಗಳಿಗೆ ನೀರು. ಹುಲ್ಲು ಒದಗಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿದ್ದಾರೆ. ತಮ್ಮ ಮನೆಯ ಕುಟುಂಬದ ಸದಸ್ಯರಲ್ಲಿ ಗೋವು ಕೂಡ ಒಂದು ಎಂದು ಭಾವಿಸಿದವರು ಬಹಳ ಜನ ಇದ್ದಾರೆ. ಅವರಿಗೆ ಹಸು ಬೇರೆ ಅಲ್ಲ. ಒಡಹುಟ್ಟಿದವರು ಬೇರೆ ಅಲ್ಲ. ಇಂಥ ಅವಿನಾ ಸಂಬಂಧ ಹಲವು ಶತಮಾನಗಳಿಂದ ಬೆಳೆದು ಬಂದಿದೆ ಎಂಬುದನ್ನು ಮರೆಯುವ ಹಾಗಿಲ್ಲ. ಈ ಮಾನವೀಯ ಸಂಬಂಧ ಕರುಳಿಗೆ ಸಂಬಂಧಿಸಿದ್ದು, ಇದನ್ನು ವಿವರಿಸಲು ಬರುವುದಿಲ್ಲ. ಎಲ್ಲ ಪಂಗಡಗಳಲ್ಲಿ ಈ ಭಾವನಾತ್ಮಕ ಸಂಬಂಧ ವಂಶಪಾರಂರ‍್ಯವಾಗಿ ಬೆಳೆದು ಬಂದಿರುವುದಂತೂ ನಿಜ. ಇಂಥ ಸಂಬಂಧಗಳನ್ನು ಕದಡುವ ಕೆಲಸ ಯಾರೇ ಮಾಡಿದರೂ ಅದು ಅಕ್ಷಮ್ಯ ಅಪರಾಧ. ಅದಕ್ಕೆ ಉಗ್ರಶಿಕ್ಷೆ ವಿಧಿಸಲೇಬೇಕು. ಸುಸಂಸ್ಕೃತ ಸಮಾಜದಲ್ಲಿ ಇವುಗಳಿಗೆ ಅವಕಾಶ ನೀಡಬಾರದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ್ತರಿಗೆ ಶಿಕ್ಷೆ ಆಗುವಂತೆ ಮುತುವರ್ಜಿ ವಹಿಸಬೇಕು. ಶಿಕ್ಷೆ ವಿಧಿಸುವಾಗ ಯಾವ ದಾಕ್ಷಿಣ್ಯವನ್ನು ತೋರಬಾರದು. ಇಂಥ ಘಟನೆಗಳಲ್ಲಿ ಸರ್ಕಾರ ಹೇಗೆ ವರ್ತಿಸುತ್ತದೆ ಎಂಬುದನ್ನು ಜನ ಕಾದು ನೋಡುತ್ತಿರುತ್ತಾರೆ.