ರಾಯಚೂರು(ದೇವದುರ್ಗ): ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯ ದೇವದುರ್ಗ-ರಾಯಚೂರು ರಾಜ್ಯ ಹೆದ್ದಾರಿಯ ಅಮರಾಪುರ ಕ್ರಾಸ್ ಹತ್ತಿರ ಬೊಲೊರೊ ಪಿಕಪ್ ವಾಹನ ಶುಕ್ರವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಹಳ್ಳದ ತಡೆಗೋಡೆಗೆ ಹೊಡೆದು ಭೀಕರ ಅಪಘಾತಕ್ಕೀಡಾಗಿ ಈ ದುರ್ಘಟನೆಯಲ್ಲಿ ವಾಹನದಲ್ಲಿದ್ದ ಐವರ ಪೈಕಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ತೀವ್ರವಾಗಿ ಗಾಯಗೊಂಡು ರಾಯಚೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತರು ನಾಗರಾಜ್ (೨೮), ಸೋಮು (೩೮), ನಾಗಭೂಷಣ (೩೬), ಮುರಳಿ (೩೮) ಎಂದು ಗುರುತಿಸಲಾಗಿದ್ದು, ಇವರು ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಹಿಂದೂಪುರ ಗ್ರಾಮದವರಾಗಿದ್ದು, ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಪ್ರತಿ ಶುಕ್ರವಾರ ಕುರಿ ಸಂತೆ ನಡೆಯುತ್ತಿದ್ದು, ಕುರಿ ಖರೀದಿಸಿ ವಾಹನದಲ್ಲಿ ಹೊರಟಿದ್ದರು. ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಾಜ್ಯ ಹೆದ್ದಾರಿಯ ಹಳ್ಳದ ತಡೆ ಗೋಡೆಗೆ ಹೊಡೆದಿದ್ದಾರೆ. ವಾಹನದ ಮುಂದೆ ಕುಳಿತಿದ್ದ ಮೂವರಲ್ಲಿ ಇಬ್ಬರು ಹಾಗೂ ಹಿಂದೆ ಮಲಗಿದ್ದ ಇಬ್ಬರು ಸಹ ಅಪಘಾತದ ಹೊಡೆತಕ್ಕೆ ತಲೆಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಾಲಕ ಆನಂದನಿಗೆ ತಿವ್ರತರವಾದ ಗಾಯಗಳಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತನಿಖಾಧಿಕಾರಿ ಸಿಪಿಐ ಗುಂಡುರಾವ್ ತಿಳಿಸಿದ್ದಾರೆ.
ಅಪಘಾತದ ಭಾರಿ ಶಬ್ದಕ್ಕೆ ಅಕ್ಕ-ಪಕ್ಕದಲ್ಲಿರುವ ಮನೆಯಲ್ಲಿದ್ದ ಜನರು ಘಟನಾ ಸ್ಥಳಕ್ಕೆ ಬಂದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಹಾಗೂ ಗಾಯಾಳು ಚಾಲಕನನ್ನು ರಾಯಚೂರು ರಿಮ್ಸ ಆಸ್ಪತ್ರೆಗೆ ರವಾನಿಸಿದ್ದಾರೆ.