ಹುಬ್ಬಳ್ಳಿ: ಹಳೆಹುಬ್ಬಳ್ಳಿ ಗಲಭೆಗೆ ಸಂಬಂಧಪಟ್ಟ ಪ್ರಕರಣಗಳನ್ನು ರಾಜ್ಯ ಸರ್ಕಾರವು ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಉಪಸಮಿತಿ, ಅಧಿಕಾರಿಗಳ ಸಮಿತಿ, ಸಚಿವ ಸಂಪುಟ ಸೇರಿ ಪ್ರಕರಣ ವಾಪಸ್ ಪಡೆಯುವ ನಿರ್ಧಾರ ಮಾಡಲಾಗಿದೆ. ಬಿಜೆಪಿಯವರು ಈ ರೀತಿ ಎಷ್ಟು ಪ್ರಕರಣಗಳನ್ನು ವಾಪಸ್ ಪಡೆದಿಲ್ಲ ಹೇಳಲಿ. ಹೀಗಾಗಿ, ಅನಗತ್ಯ ರಾಜಕೀಯ ಮಾಡುವುದನ್ನು ಬಿಜೆಪಿಯವರು ಬಿಡಲಿ ಎಂದು ಹೇಳಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡಲು ಪ್ರಕರಣ ವಾಪಸ್ ಪಡೆದಿದೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಲ್ಪಸಂಖ್ಯಾತ ಕಲ್ಯಾಣ ಆಗಬೇಕು ಎಂದು ಬಯಸುವುದು ಗುನ್ನೆನಾ? ನಮಗೆಲ್ಲರೂ ಭಾರತೀಯರೆ. ಸಮಾಜ ಒಡೆಯುವ ಇಂತಹ ಮಾತುಗಳಿಂದ ರಾಷ್ಟ್ರ ಕಟ್ಟಲು ಆಗುವುದಿಲ್ಲ ಎಂದು ಕುಟುಕಿದರು.