ಹಳಿ ತಪ್ಪಿದ ವಾಸ್ಕೋಡಗಾಮಾ ಯಶವಂತಪುರ ರೈಲು

ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯಲ್ಲಿ ಬರುವ ಕಾರಂಜೋಲಾ-ಕ್ಯಾಸಲ್ ರಾಕ್ ರೈಲ್ವೆ ಮಾರ್ಗದಲ್ಲಿ ರವಿವಾರ ಬೆಳಗಿನ ಜಾವ ವಾಸ್ಕೋ ಡ ಗಾಮಾ- ಯಶವಂತಪುರ ರೈಲಿನ (ರೈಲು ಸಂಖ್ಯೆ- ೧೭೩೧೦) ಒಂದು ಬೋಗಿ ಹಳಿ ತಪ್ಪಿದ್ದು, ಯಾವುದೇ ರೀತಿಯ ಅಪಾಯಗಳು ಸಂಭವಿಸಿಲ್ಲ. ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರು ತಲುಪಬೇಕಾದ ಸ್ಥಳಕ್ಕೆ ತಲುಪಿಸಲಾಗಿದೆ. ಈ ಮಾರ್ಗದಲ್ಲಿ ಬೆಳಿಗ್ಗೆ 9 ಗಂಟೆಯಿಂದ ನಿಗದಿತ ಸಮಯಕ್ಕೆ ಸಂಚರಿಸಬೇಕಾದ ರೈಲುಗಳು ಸಂಚರಿಸುತ್ತಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಬೆಳಿಗ್ಗೆ 2.30ರ ಹೊತ್ತಿಗೆ ಕಾರಂಜೋಲ್-ಕ್ಯಾಸಲ್ ರಾಕ್ ರೈಲ್ವೆ ನಿಲ್ದಾಣಗಳ ನಡುವೆ ವಸ್ಕೋ ಡ ಗಾಮಾ-ಯಶವಂತಪುರ ರೈಲಿನ ಒಂದು ಬೋಗಿ ಹಳಿ ತಪ್ಪಿತ್ತು. ತಕ್ಷಣ ರೈಲ್ವೆ ಅಪಘಾತ ನಿರ್ವಹಣ ತಂಡ ಪ್ರಯಾಣಿಕರ ನೆರವಿಗೆ ಧಾವಿಸಿತು. ಲೋಂಡಾ ರೈಲ್ವೆ ನಿಲ್ದಾಣದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರಿಗೆ ಉಪಹಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಪಘಾತ ನಿರ್ವಹಣಾ ಪಡೆಯ ತಜ್ಞರ ತಂಡ ಕ್ಷಿಪ್ರ ದುರಸ್ತಿ ಕಾರ್ಯ ಕೈಗೊಂಡಿದ್ದರಿಂದ ಬೆಳಿಗ್ಗೆ 9 ಗಂಟೆ ಹೊತ್ತಿಗೆ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಪುನಃ ರೈಲು ಸಂಚಾರ ಆರಂಭಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೈಲುಗಳು ನಿಗದಿತ ಸಮಯಕ್ಕೆ ಸರಿಯಾಗಿ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.