ಹರಳ ಎಲೆ ತಿಂದು 86 ಕುರಿ ಸಾವು

ದಾವಣಗೆರೆ: ಚಿಗುರೊಡದ ಹರಳ (ಔಡಲ) ಎಲೆ ತಿಂದು 86 ಕುರಿಗಳು ಮೃತಪಟ್ಟು ಲಕ್ಷಾಂತರ ರುಪಾಯಿ ನಷ್ಟವಾಗಿರುವ ಘಟನೆ ಚನ್ನಗಿರಿ ತಾಲೂಕಿನ ಕೊಮರನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಲಾಹಾಲ್ ಗ್ರಾಮದ ತಿಮ್ಮೇಶ್ 150 ಕುರಿಗಳನ್ನು ಸೇರಿದಂತೆ ಕುರಿಗಾಹಿಗಳು ನೂರಾರು ಕುರಿಗಳನ್ನು ಚನ್ನಗಿರಿ ತಾಲೂಕಿನ ಗೋಪೆನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ಹೊಲಗಳಲ್ಲಿ ಬೀಡು ಬಿಟ್ಟಿದ್ದರು.
ಭಾನುವಾರ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯ ಕೊಮರನಹಕಳ್ಳಿ ಗ್ರಾಮದ ರೈತರ ಹೊಲದಲ್ಲಿ ಮೇಯಿಸಲು ಬೀಡು ಬಿಟ್ಟಿದ್ದರು. ಈ ಸಂದರ್ಭದಲ್ಲಿ ರೈತರ ಹೊಲದಲ್ಲಿ ಹಾಕಿದ್ದ ಚಿಗುರೊಡೆದ ಹರಳ ಎಲೆಯನ್ನು ತಿಂದಿವೆ. ಸ್ವಲ್ಪ ಸಮಯದ ನಂತರ ಅಸ್ವಸ್ಥಗೊಂಡು ಒದ್ದಾಡಿವೆ. ಬಳಿಕ 86 ಕುರಿಗಳು ಕೊನೆಯುಸಿರೆಳೆದಿವೆ.
ಕಣ್ಣೆದುರಿಗೆ ಮೃತಪಟ್ಟ ಕುರಿಗಳನ್ನು ಕಂಡು ಕುರಿಗಾಹಿಗಳ ರೋದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ಚನ್ನಗಿರಿ ತಹಸೀಲ್ದಾರ್ ನಾಗರಾಜ್, ಚನ್ನಗಿರಿ ಪೊಲೀಸರು ಪಶು ವೈದ್ಯಾಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಮೃತಪಟ್ಟ ಕುರಿಗಳ ಮಾಲೀಕನಿಗೆ ಪರಿಹಾರ ಕೊಡಿಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದ್ದಾರೆ.