ಬಾಗಲಕೋಟೆ: ದೀಪ ಆರುವಾಗ ಜೋರಾಗಿ ಉರಿಯುತ್ತದೆ. ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಥೆಯೂ ಇದೇ ಆಗಿತ್ತು. ಅವರನ್ನು ಹೊರಗೆ ಹಾಕಿ ಬಿಜೆಪಿ ಸರಿಯಾದ ನಿರ್ಣಯ ಕೈಗೊಂಡಿದೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ , ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ತಮ್ಮದೇ ಪಕ್ಷದ ನಾಯಕರ ವಿರುದ್ಧ ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದರು. ಇತಿ,ಮಿತಿ ದಾಟಿದಾಗ ಉಚ್ಛಾಟನೆ ಪ್ರಕ್ರಿಯೆ ಸಹಜ. ಬಿಜೆಪಿ ಸರಿಯಾದ ನಿರ್ಧಾರ ಕೈಗೊಂಡಿದೆ. ಉಪ್ಪು ಇರಲಾದರದೆ ಉರಿಯಬಾರದು ಎಂಬ ಮಾತು ಇದೆ. ಉಪ್ಪಿಲ್ಲದೇ ಉರಿದರೆ ಏನಾಗುತ್ತದೆ ಎಂಬುದಕ್ಕೆ ಯತ್ನಾಳ ಸಾಕ್ಷಿ ಎಂದರು.
ಪಂಚಮಸಾಲಿ ಶಾಸಕರು ಬಿಜೆಪಿ ಬಿಟ್ಟು ಬರವಂತೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀಬಸವಜಯಮೃತ್ಯುಂಜಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕಾಶಪ್ಪನವರ, ನಾನೂ ಸಮಾಜದಲ್ಲಿ ಜನಿಸಿದ್ದೇನೆ, ಸಮಾಜದ ರಾಷ್ಟ್ರೀಯ ಅಧ್ಯಕ್ಷನಾಗಿದ್ದೇನೆ ಇಂಥ ನಿರ್ಧಾರಗಳನ್ನು ಪ್ರಕಟಿಸುವಾಗ ಸ್ವಾಮೀಜಿ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಎಲ್ಲರೂ ಸೇರಿ ಅವರನ್ನು ಗುರುಗಳನ್ನಾಗಿಸಿದ್ದೇವೆ. ಸಮುದಾಯವನ್ನು ಆಹ್ವಾನಿಸಿ ಅವರು ಚರ್ಚಿಸಬೇಕು. ಬಿಜೆಪಿ ಶಾಸಕರುಗಳಿಗೆ ಸ್ವಾಮೀಜಿ ಮಾತು ಕೇಳಿ ರಾಜೀನಾಮೆ ನೀಡಲು ತಲೆಕೆಟ್ಟಿಲ್ಲ. ಯತ್ನಾಳ ಮಿತಿಮೀರಿ ವರ್ತಿಸಿದಕ್ಕೆ ಪಕ್ಷ ಅಂಥ ನಿರ್ಣಯ ಕೈಗೊಂಡಿದೆ. ಇದರಿಂದ ಸಮುದಾಯಕ್ಕೇನು ಅನ್ಯಾಯ ಆಗಿಲ್ಲ. ಸಮಾಜಕ್ಕೆ ಯತ್ನಾಳ ಕೊಡುಗೆಯೂ ಏನೂ ಇಲ್ಲ ಎಂದಿದ್ದಾರೆ.