ದಾವಣಗೆರೆ: ಚುನಾವಣೆಯಲ್ಲಿ ಸೋತ ನಂತರ ಸುಮ್ಮನೆ ಮನೆಯಲ್ಲಿ ಆರಾಮಾಗಿರುವುದನ್ನು ಬಿಟ್ಟು ಸ್ವಪಕ್ಷೀಯರ ವಿರುದ್ಧವೇ ಟೀಕೆ ಮಾಡಿಕೊಂಡು ಓಡಾಡಲು ಅದೆಷ್ಟು ಸೊಕ್ಕಿರಬೇಕು ಎಂದು ದಾವಣಗೆರೆ ದಕ್ಷಿಣ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಹರಿಹಾಯ್ದರು. ನಗರದ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಹಿಂದೂ ಮಹಾಗಣಪತಿ ಧ್ವಜಸ್ತಂಭ ಪೂಜೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಾಜಿತ ಬಿಜೆಪಿ ಅಭ್ಯರ್ಥಿಯ ಗಂಡ ಸಿದ್ದೇಶ್ ನಮ್ಮ ಅಳಿಯ. ಅದ್ಯಾಕೆ ಪ್ರಲಾಪ ಮಾಡಿಕೊಂಡು, ಅಳುತ್ತಿದ್ದಾರೋ ಗೊತ್ತಿಲ್ಲ ಎಂದರು. ಭೀಮಸಮುದ್ರದಿಂದ ದಾವಣಗೆರೆಗೆ ಬರುವಾಗ ಅದೇನು ತಂದಿದ್ದರು ಅಂತ ಕೇಳಿ. ಸೋತ ಮೇಲೆ ಆರಾಮಾಗಿ ಮನೆಯಲ್ಲಿರಬೇಕು. ಅದನ್ನು ಬಿಟ್ಟು ಹತಾಶೆಯಿಂದ ತಮ್ಮದೇ ಪಕ್ಷದ ಹಿರಿಯರನ್ನು ಟೀಕಿಸುವುದು ದುರಹಂಕಾರ ಎನಿಸಿಕೊಳ್ಳುತ್ತದೆ ಎಂದರು.