ಸ್ನೇಹಿತನಿಂದಲೇ ಯುವತಿ ಕೊಲೆ: ಪ್ರಮುಖ ಆರೋಪಿ ಬಂಧನ

0
26

ಹಾವೇರಿ: ರಾಣೆಬೆನ್ನೂರಿನಲ್ಲಿ ನರ್ಸ್ ಆಗಿದ್ದ ಯುವತಿಯನ್ನು ಸ್ನೇಹಿತನೇ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಶವ ಎಸೆದಿರುವುದು ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ(೨೨) ಕೊಲೆಯಾದ ಯುವತಿ. ಹಿರೇಕೆರೂರು ತಾಲೂಕು ಹಳೇವೀರಾಪುರ ಗ್ರಾಮದ ನಯಾಜ್ ಇಮಾಮ್‌ಸಾಬ್ ಬೆಣ್ಣಿಗೇರಿ(೨೮) ಬಂಧಿತ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಸ್ನೇಹಿತರಾದ ರಟ್ಟಿಹಳ್ಳಿ ತಾಲೂಕಿನ ಮಾಸೂರಿನ ದುರ್ಗಾಚಾರಿ ಬಡಿಗೇರ ಹಾಗೂ ವಿನಾಯಕ ನಾಗಪ್ಪ ಪೂಜಾರಿ ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ.
೬ರಂದು ಯುವತಿಯ ಮೃತದೇಹ ರಾಣೆಬೆನ್ನೂರು ತಾಲೂಕು ಪತ್ತೇಪುರ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿತ್ತು. ಮೃತದೇಹವನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರು ಇಲ್ಲದ ಕಾರಣ ಶವವನ್ನು ಹೂಳಲಾಗಿತ್ತು. ದೇಹದ ಮೇಲೆ ಬಲವಾಗಿ ಹೊಡೆದು ಗಾಯ ಆಗಿರುವ ಅಂಶ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಲಗೇರಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.
ಅತ್ತ ಮಾ. 3ರಂದೇ ಸ್ವಾತಿ ಕಾಣೆಯಾಗಿರುವ ಕುರಿತು ಆಕೆಯ ಪೋಷಕರು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್‌ನಲ್ಲಿ ಯುವತಿ ಚಹರೆ ಬಗ್ಗೆ ಸಿಕ್ಕ ಮಾಹಿತಿ ತಾಳೆಯಾದ್ದರಿದ ನದಿಯಲ್ಲಿ ಸಿಕ್ಕ ಶವ ಸ್ವಾತಿ ರಮೇಶ ಬ್ಯಾಡಗಿ ಎಂಬುದು ಖಚಿತವಾಯಿತು. ಆಗ ಆರೋಪಿತರ ಪತ್ತೆ ಕಾರ್ಯ ಇನ್ನಷ್ಟು ಚುರುಕುಗೊಳಿಸಿದ ಪೊಲೀಸರಿಗೆ ಸ್ವಾತಿ ಕೊಲೆಗಾರರು ಯಾರು ಸುಳಿವು ಸಿಕ್ಕಿದೆ.
ಸ್ನೇಹಿತನೇ ಕೊಲೆಗಾರ..
ಸ್ವಾತಿ ಹಾಗೂ ಪ್ರಮುಖ ಆರೋಪಿ ನಯಾಜ್ ಇಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಮಾ. 3ರಂದು ಸ್ವಾತಿಯನ್ನು ರಟ್ಟೀಹಳ್ಳಿಯಿಂದ ಕಾರಿನಲ್ಲಿ ರಾಣೆಬೆನ್ನೂರಿನ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪರಸ್ಪರರಿಗೆ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಬಂದಿದೆ. ನಂತರ ನಯಾಜ್ ತನ್ನ ಸ್ನೇಹಿತರಾದ ದುರ್ಗಾಚಾರಿ ಮತ್ತು ವಿನಾಯಕನನ್ನು ಕರೆಸಿಕೊಂಡಿದ್ದಾನೆ. ಸಂಜೆ 4ಗಂಟೆ ಸುಮಾರಿಗೆ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಸಮೀಪವಿರುವ ಪಾಳು ಬಿದ್ದಿರುವ ತರಳಬಾಳು ಶಾಲೆಯಲ್ಲಿ ಸ್ವಾತಿಗೆ ಹೊಡೆದು ಟವೆಲ್‌ನಿಂದ ಕುತ್ತಿಗೆಗೆ ಹಾಕಿ ಜಗ್ಗಿ ಕೊಲೆ ಮಾಡಿದ್ದಾರೆ. ನಂತರ ಮೂವರೂ ಸೇರಿ ರಾತ್ರಿ ೧೧ಗಂಟೆ ವೇಳೆಗೆ ವಿನಾಯಕನ ಕಾರಿನ ಡಿಕ್ಕಿಯಲ್ಲಿ ಸ್ವಾತಿಯ ಶವವನ್ನು ಹಾಕಿಕೊಂಡು ಕೂಸಗಟ್ಟಿ ನಂದಿಗುಡಿ ಗ್ರಾಮದ ಮಧ್ಯೆ ಇರುವ ತುಂಗಭದ್ರಾ ನದಿಯ ಸೇತುವೆಯ ಮೇಲಿಂದ ಶವವನ್ನು ಎಸೆದಿದ್ದಾರೆ.

Previous articleಚಿರತೆ ಸೆರೆ: ಗ್ರಾಮಸ್ಥರ ನಿಟ್ಟುಸಿರು
Next articleಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗೆ ಬಾಟಲಿ ಎಸೆತ