ನಾನು ಅನ್ಯಾಯ ನೋಡಿಕೊಂಡು ಸುಮ್ಮನೇ ಕೂಡುವ ಆಸಾಮಿ ಅಲ್ಲ. ಇಲ್ಲಿ ಏನು ನಡೀತಿದೆ ಎಂದು ಸೋದಿ ಮಾಮಾ ಅವರಿಗೆ ಬಹಿರಂಗ ಪತ್ರ ಬರೆಯುತ್ತೇನೆ ಎಂದು ಪಂಚಾಯ್ತಿ ಸದಸ್ಯ ಪಾಮಣ್ಣ ಹೇಳಿದ್ದ. ಯಾವತ್ತೂ ಕೊಟ್ಟ ಮಾತಿಗೆ ತಪ್ಪಲಾರದ ಪಾಮಣ್ಣ ಯಾವಾಗ ಪತ್ರ ಬರೆಯುತ್ತಾನೆಯೋ ಮುಂದೇನು ಕಾದಿದೆಯೋ ಎಂಬ ಆತಂಕ ಊರಿನ ಕೆಲವರಿಗೆ ಕಾಡುತ್ತಿತ್ತು. ಕೊನೆಗೊಂದು ದಿನ ಸಣ್ಣೆಂಕೋಬಣ್ಣನ ಅಂಗಡಿಗೆ ಹೋಗಿ ಬಿಳಿಹಾಳೆ ಪೆನ್ನು ತೆಗೆದುಕೊಂಡು ಬಂದು ಸುಧೀರ್ಘ ಪತ್ರ ಬರೆಯಲು ಕುಳಿತ…. ಯಾರ ವಿರುದ್ಧ ಬರೆಯಬೇಕು ಎಂದು ಮೊದಲೇ ಪಾಯಿಂಟ್ಸ್ ಮಾಡಿಟ್ಟುಕೊಂಡು ಶುರುಮಾಡಿದ.
ಪ್ರಿಯ ಸೋದಿಮಾಮಾರಿಗೆ…
ಇಲ್ಲಿ ಹೇಳೋರು-ಕೇಳೋರು ಯಾರೂ ಇಲ್ಲ. ಎಲ್ಲರೂ ತಮ್ಮ ಮನಸ್ಸಿಗೆ ಬಂದಂತೆ ಇರುತ್ತಾರೆ. ಒಬ್ಬರಿಗೂ ಏನನ್ನೂ ಹೇಳದ ಪರಿಸ್ಥಿತಿ ಬಂದಿದೆ. ಶಾಸಕರು ಜಿಪಂ ಸದಸ್ಯನಿಗೆ ಏನಾದರೂ ಹೇಳಲು ಹೋದರೆ… ನೀನ್ಯಾರು ಹೇಳಲು ಎಂದು ಕೇಳುತ್ತಾರೆ. ಜಿಪಂ ಸದಸ್ಯ ತಾಪಂ ಸದಸ್ಯನಿಗೆ ನೋಡಪಾ ಅಂದರೆ ನಿನ್ನ ಕೆಲಸ ನೀನು ನೋಡಪಾ ಅಂತಿದಾರೆ… ಇನ್ನು ತಾಪಂ ಸದಸ್ಯರು ನಮ್ಮ ಗ್ರಾಪಂ ಸದಸ್ಯನಿಗೆ ಹೇಳಲು ಹೋದರೆ… ನಿನಗ್ಯಾಕೆ ಅದರ ಉಸಾಪರಿ ಎಂದು ಬಯ್ದು ಕಳಿಸುತ್ತಾರೆ. ಆ ಪೋಸ್ಟಿನ ಹುಡುಗನ ಅಟಾಟೋಪ ಹೇಳತೀರದ್ದಾಗಿದೆ. ಮೊನ್ನೆ ನನಗೆ ಅಮೆರಿಕದ ಟ್ರಂಪೇಸಿ ಪತ್ರ ಬರೆದಿದ್ದ. ಅದನ್ನು ತಿಪ್ಪಣ್ಣನಿಗೆ ಕೊಟ್ಟು ಬಂದಿದ್ದಾನೆ. ನಾನೊಂದು ಬಾರಿ ರಷ್ಯಾದ ಪುಟ್ಯಾನಿಗೆ ಪತ್ರ ಬರೆದು ಪೋಸ್ಟ್ ಡಬ್ಬದಲ್ಲಿ ಹಾಕಿದ್ದೆ. ಅದನ್ನು ಓದಿ ಹರಿದುಹಾಕಿದ. ಎಷ್ಟೋ ದಿನಗಳ ನಂತರ ನಾನೇ ಆತನಿಗೆ ಕಾಲ್ ಮಾಡಿ ಪುಟ್ಟಣ್ಣಾ ಪತ್ರ ಬರೆದಿದ್ದೆ ಎಂದು ಹೇಳಿದಾಗ…ಯಾವ ಪತ್ರವೂ ಬಂದಿಲ್ಲ ಬುಡು ಅಂದ. ಈಗ ನೀವು ಇವುಗಳನ್ನೆಲ್ಲ ಗಮನಿಸಿ ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸಿ ಎಂದು ಪತ್ರ ಬರೆದು ಅದಕ್ಕೆ ಅಂಟು ಹಚ್ಚಿ ಪೋಸ್ಟ್ ಡಬ್ಬಿಗೆ ಹಾಕಿಬಂದ. ಮೊದಲೇ ಪತ್ರ ಬರೆಯುತ್ತೇನೆ ಎಂದು ಹೇಳಿದ್ದನಾದ್ದರಿಂದ ಪೋಸ್ಟಿರುಪಿ ಅದನ್ನು ಒಡೆದು ಓದಿ ಹರಿದು ಹಾಕಿದ… ಸೋದಿ ಮಾಮಾನಿಗೆ ಬರೆದ ಪತ್ರ ತುಂಡು ತುಂಡಾಗಿ ಗಟಾರದಲ್ಲಿ ಹರಿದುಹೋಯಿತು. ಪಾಮಣ್ಣ ಮಾತ್ರ ಪತ್ರ ಬರೆದಿದ್ದೇನೆ ಇಷ್ಟರಲ್ಲಿ ನೋಡಿ ಐತಿ ಮಜಾ ಎಂದು ಎಲ್ಲರೆದುರು ಹೇಳಿಕೊಂಡು ಬರುತ್ತಿದ್ದಾನೆ.