ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲು ಕಾಂಗ್ರೆಸ್ ಸರ್ಕಾರ ನಿರಾಕರಿಸುತ್ತಿರುವ, ಹಿಂದೇಟು ಹಾಕುತ್ತಿರುವುದು ಆತಂಕಕ್ಕೆ ಹಾಗೂ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಈ ನಿರಾಕರಣೆ ನಡೆಯು ಕೇವಲ ಆಡಳಿತಾತ್ಮಕ ವಿಳಂಬ ಮಾತ್ರವಲ್ಲ. ರಾಜ್ಯ ಸರ್ಕಾರದ ಆಶ್ರಯದಲ್ಲಿ ಬೆಳೆಯುತ್ತಿರುವ (ಇಸ್ಲಾಮಿಕ್) ಮೂಲಭೂತವಾದಿ ಶಕ್ತಿಗಳೊಂದಿಗಿನ ಮೈತ್ರಿಯನ್ನು ರಕ್ಷಿಸಲು ದುರುದ್ದೇಶಪೂರ್ವಕವಾಗಿ ತನಿಖೆ ತಡೆಯುವ ಪ್ರಯತ್ನದ ಪ್ರತಿಬಿಂಬಿವಾಗಿದೆ ಎಂದರು.
ಸುಹಾಸ್ ಶೆಟ್ಟಿ ಪ್ರಕರಣದ ಪಾರದರ್ಶಕ ತನಿಖೆಯಾಗಬೇಕು ಮತ್ತು ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಬೇಕು. ಇದೊಂದು ಕೊಲೆ ಪ್ರಕರಣ ಮಾತ್ರವಲ್ಲ, ಕರ್ನಾಟಕವನ್ನು ವಿಷಪೂರಿತಗೊಳಿಸುವ, ರಕ್ತಸಿಕ್ತಗೊಳಿಸುವ ಪ್ರಕರಣವಾಗಿದೆ. ಜನರ ವಿಶ್ವಾಸ ಗಳಿಸಲು ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸುವುದು ಸೂಕ್ತ ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ನ್ಯಾಯೋಚಿತವಾಗಿ ತನಿಖೆಗೆ ಬೆಂಬಲ ನೀಡಬೇಕಾಗಿದ್ದ ಸ್ಪೀಕರ್ ತನಿಖೆಯ ಆರಂಭದ ಮೊದಲೇ ತನಿಖೆಯ ದಾರಿ ತಪ್ಪಿಸುವ ರೀತಿಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸುಹಾಸ್ ಕೊಲೆ ಪ್ರಕರಣದ ಓರ್ವ ಆರೋಪಿಯಾಗಿರುವ ವ್ಯಕ್ತಿಯನ್ನು ಸಮರ್ಥಿಸಿಕೊಂಡು ಕ್ಲೀನ್‌ಚಿಟ್ ನೀಡಿರುವುದು ಅಚ್ಚರಿ ಮೂಡಿಸಿದೆ. ಸ್ಪೀಕರ್‌ಗೆ ಕ್ಲೀನ್‌ಚಿಟ್ ನೀಡುವ ಆತುರತೆ ಏನಿತ್ತು ಎಂದು ಪ್ರಶ್ನಿದರು.
ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಕರಣಗಳು ಇಸ್ಲಾಮಿಕ್ ಮೂಲಭೂತವಾದ ಮತ್ತು ರಾಷ್ಟ್ರೀಯತೆಯ ಮಧ್ಯೆ ನಡೆಯುವ ಹೋರಾಟವಾಗಿದೆ. ಇದನ್ನು ಕೇವಲ ಕಮ್ಯುನಲ್ ಹೋರಾಟ, ವೈಯಕ್ತಿಕ ದ್ವೇಷ, ರಿವೇಂಜ್ ಕಿಲ್ಲಿಂಗ್ ಎಂಬ ಬಾಲಿಶವಾಗಿ ಮಾತನಾಡಬಾರದು.
ರಾಷ್ಡ್ರವಿರೋಧಿ, ಇಸ್ಲಾಮಿಕ್ ಮೂಲಭೂತವಾದ, ಜಿಹಾದಿ ಎಲಿಮೆಂಟ್‌ಗಳ ಪಾತ್ರವನ್ನು ಮರೆಮಾಚುವ ಪ್ರಯತ್ನವನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಪಿಎಫ್‌ಐಗೆ ಚಟುವಟಿಕೆಗಳಿಗೆ ಕರ್ನಾಟಕ ಸುರಕ್ಷಿತ ತಾಣವಾಗಿ ರಾಜ್ಯ ಸರಕಾರ ಮಾಡುತ್ತಿದೆ. ಕಾಂಗ್ರೆಸ್ ಸರಕಾರದ ಮಾದರಿ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಪ್ರತಿಬಿಂಬಿತವಾಗಿದೆ. ಫಾಝಿಲ್ ಕುಟುಂಬಕ್ಕೆ ಕ್ಲೀನ್‌ಚಿಟ್ ನೀಡುವಲ್ಲಿ ಉತ್ಸಾಹ ತೋರಿದ ಕಾಂಗ್ರೆಸ್ ನಾಯಕರು ಸುಹಾಸ್ ಶೆಟ್ಟಿಗೆ ರೌಡಿಶೀಟರ್ ಎಂಬ ಹಣೆಪಟ್ಟಿ ಕಟ್ಟಿ ಪ್ರಕರಣದ ಸೈದ್ಧಾಂತಿಕ ವಾಸ್ತವಿಕತೆಯನ್ನು ಮರೆಮಾಚುವ ಪ್ರಯತ್ನ ನಡೆಸಿದರು. ಇದು ದ.ಕ ಮತ್ತು ಕರಾವಳಿ ಜನರ ಮೇಲೆ ಕಾಂಗ್ರೆಸ್ ಮಾಡಿರುವ ದ್ರೋಹದ ಪ್ರಕ್ರಿಯೆಯ ಮುಂದುವರಿದ ಭಾಗ ಎಂದು ಬಣ್ಣಿಸಿದರು.
ಆರಂಭದಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ವೈಯಕ್ತಿಕ, ಬಳಿಕ ಕಮ್ಯುನಲ್ ಪ್ರಕರಣವನ್ನು ಬಿಂಬಿಸಲಾಯಿತು ಎಂದರು.