ಸುಹಾಸ್ ಅಂತಿಮ ಯಾತ್ರೆ: ಬಿ.ಸಿ. ರೋಡ್ ಉದ್ವಿಗ್ನ

ಮಂಗಳೂರು: ಹತ್ಯೆಗೀಡಾದ ಸುಹಾಸ್ ಶೆಟ್ಟಿಯ ಅಂತಿಮ ಯಾತ್ರೆ ನಗರದ ಎ.ಜೆ. ಆಸ್ಪತ್ರೆಯಿಂದ ಬಂಟ್ವಾಳದ ಆತನ ನಿವಾಸದವರೆಗೆ ಸಾಗಿ ಕಾರಿಂಜದ ಪುಳಿಮಜಲಿನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಈ ಸಂದರ್ಭ ಹಿಂದು ಸಂಘಟನೆ ಮುಖಂಡರು, ಬಿಜೆಪಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.
ಗುರುವಾರ ರಾತ್ರಿ ಸುಹಾಸ್ ಪಾರ್ಥೀವ ಶವವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ರಾತ್ರಿ ಇಡೀ ಕಾರ್ಯಕರ್ತರ ದಂಡು ಆಸ್ಪತ್ರೆಯಲ್ಲಿ ಜಮಾಯಿಸಿದ್ದು, ಅಂತಿಮ ದರ್ಶನಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿದರು. ಹಿಂದು ಸಂಘಟನೆ ಹಾಗೂ ಬಿಜೆಪಿ ಮುಖಂಡರು ಕೂಡ ಆಗಮಿಸಿ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಕಾರ್ಯಕರ್ತರ ಮನವೊಲಿಸುತ್ತಿದ್ದರು.
ಅಂತಿಮ ಯಾತ್ರೆ:
ಅಂತಿಮ ಯಾತ್ರೆಯು ಆಸ್ಪತ್ರೆಯಿಂದ ಹೊರಟು ನಂತೂರು-ಪಂಪ್‌ವೆಲ್-ಪಡೀಲ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬಂಟ್ವಾಳ ಕಾರಿಂಜದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಹಿಂದು ಕಾರ್ಯಕರ್ತರ ದಂಡು ಕಾರು ಹಾಗೂ ದ್ವಿಚಕ್ರ ವಾಹನಗಳಲ್ಲಿ ದಾರಿಯುದ್ಧಕ್ಕೂ ಅಂತಿಮ ಯಾತ್ರೆಯನ್ನು ಹಿಂಬಾಲಿಸಿತು. ಕಾರಿಂಜದಲ್ಲಿ ನಡೆದ ಅಂತ್ಯಸಂಸ್ಕಾರ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಹಿಂಪ ಅಂತಾರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಿಲಿಂದ್ ಪರಾಂಜೆ, ಆರ್‌ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಈ ವೇಳೆ ಸುಹಾಸ್ ಅಮರ್ ರಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.
ಉದ್ವಿಗ್ನ:
ಅಂತಿಮ ಯಾತ್ರೆ ವೇಳೆ ಬಿ.ಸಿ. ರೋಡ್ ಪೇಟೆಯಲ್ಲಿ ಆಟೋರಿಕ್ಷಾವೊಂದು ಅಡ್ಡಬಂದ ಪರಿಣಾಮ ಕಾರ್ಯಕರ್ತರು ರೊಚ್ಚಿಗೆದ್ದ ಘಟನೆ ನಡೆಯಿತು. ಇದರಿಂದಾಗಿ ಉದ್ವಿಗ್ನ ವಾತಾವರಣ ಉಂಟಾಯಿತು. ಸುಹಾಸ್‌ನ ಅಂತಿಮ ಯಾತ್ರೆ ಸಾಗುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ಅಮರ್ ರಹೇ ಎಂದು ಘೋಷಣೆ ಕೂಗುತ್ತಿದ್ದರು. ಆಗ ಆಟೋರಿಕ್ಷಾವೊಂದು ಅಂತಿಮ ಯಾತ್ರೆ ಮಧ್ಯೆ ಸಿಲುಕಿಕೊಂಡಿತು. ಇದು ಮೆರವಣಿಗೆಗೆ ತಡೆಯಾಗಿ ಪರಿಣಮಿಸಿದ ಕಾರಣ ಕಾರ್ಯಕರ್ತರು ಸಿಟ್ಟಿಗೆದ್ದು ಆಟೋರಿಕ್ಷಾಗೆ ಹಾನಿ ಉಂಟು ಮಾಡಿದರು.