ಹಾವೇರಿ: ಜಿಲ್ಲೆಯ ವಿವಿಧ ಭಾಗದಲ್ಲಿ ಗುರುವಾರ ಸಂಜೆ ಮಳೆಯಾಗಿದ್ದು, ಇಳೆ ತಂಪಾಗಿದೆ. ಗುರುವಾರ ಸಂಜೆ ಗುಡುಗು, ಮಿಂಚು, ಗಾಳಿ ಸಹಿತವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಸೆಕೆಯಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಹಾವೇರಿ, ಹಾನಗಲ್ಲ ಹಾಗೂ ಸವಣೂರು, ಹಿರೇಕೆರೂರ ತಾಲೂಕಿನ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಉಳಿದ ತಾಲೂಕುಗಳಲ್ಲಿ ಗಾಳಿ, ಗುಡುಗಿನ ಆರ್ಭಟದಲ್ಲೇ ಮುಗಿದಿದೆ. ಹಾವೇರಿ, ಹಾನಗಲ್ಲ ತಾಲೂಕಿನ ಆಡೂರು ಭಾಗದಲ್ಲಿ ಸಂಜೆ 5ಗಂಟೆ ಸುಮಾರಿಗೆ ಜೋರಾದ ಗಾಳಿ, ಗುಡುಗು ಸಹಿತವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಜಿಟಿಜಿಟಿ ಮಳೆ ಸುರಿಯಿತು. ಗಾಳಿ ರಭಸಕ್ಕೆ ಹಾನಗಲ್ಲ ತಾಲೂಕು ಹೇರೂರು ಗ್ರಾಮದ ಚಂದ್ರಪ್ಪ ನಿಂಬನಗೌಡ್ರ ಎಂಬವರಿಗೆ ಸೇರಿದ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದು ಮೇಲ್ಛಾವಣಿ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ. ಕಳೆದ ಕೆಲವು ದಿನಗಳಿಂದ ಬಿಸಿಲು, ಸೆಕೆಯ ತೀವ್ರತೆಯಿಂದ ಕಂಗೆಟ್ಟಿದ್ದ ಜನತೆಗೆ ಮಳೆಯಿಂದ ಸ್ವಲ್ಪ ತಂಪಾಗಿದೆ. ಬುಧವಾರ ಕೂಡ ನಗರದಲ್ಲಿ ನಾಲ್ಕು ಹನಿ ಬಿದ್ದಿತ್ತಾದರೂ ಗುರುವಾರ ಸ್ವಲ್ಪ ಜೋರಾಗಿ ಮಳೆಯಾಗಿರುವುದರಿಂದ ಸಮಾಧಾನ ತಂದಿದೆ.