ಸಿ.ಟಿ. ರವಿ ವಿರುದ್ಧ ಪ್ರಧಾನಿಗೆ ದೂರು: ಹೆಬ್ಬಾಳ್ಕರ್‌ ಸವಾಲು

0
3

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಬಳಸಿದ್ದ ಅವಾಚ್ಯ ಶಬ್ದದ ಕುರಿತು ಪ್ರಧಾನಿ ನರೇಂದ್ರ ಮೋದಿಗೂ ದೂರು ನೀಡುವೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಕಳೆದ ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. ನಾನೇನು ರೆಡ್ ಕಾರ್ಪೆಟ್ ಮೇಲೆ ಬಂದಿಲ್ಲ. ಕಳೆದ ೨೬ ವರ್ಷಗಳಿಂದ ಸಂಘರ್ಷದಿಂದ ಮೇಲೆ ಬಂದಿದ್ದೇನೆ ಎಂದರು.
ಪರಿಷತ್‌ನಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಬಳಸಿದ್ದಾರೆ ಎನ್ನಲಾದ ಅವಾಚ್ಯ ಪದ ಬಳಕೆಯ ವಿಡಿಯೋ ಸಾಕ್ಷ್ಯವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ್ದಾರೆ. ಡಿ. ೧೯ರಂದು ಪರಿಷತ್‌ನಲ್ಲಿ ಸಿ.ಟಿ. ರವಿ ಅವರು ಬಳಸಿದ್ದಾರೆ ಎನ್ನಲಾದ ಅವಾಚ್ಯ ಪದದ ವಿಡಿಯೋ ಬಿಡುಗಡೆ ಮಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಬಗ್ಗೆ ಸಭಾಪತಿಗಳಿಗೆ ಮತ್ತೊಮ್ಮೆ ದೂರು ನೀಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡುವೆ ಎಂದು ಹೇಳಿದ್ದಾರೆ.
ಅಂದಿನ ಆ ವಿಲಕ್ಷಣ ಘಟನೆಯ ಬಳಿಕ ಸಿ.ಟಿ. ರವಿ ಹಾರ ತುರಾಯಿ ಹಾಕಿಸಿಕೊಂಡು ವೈಭವೀಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ. ನಾನು ಮತ್ತೆ ಸಭಾಪತಿ ಅವರಿಗೆ ದೂರು ಕೊಡುತ್ತೇನೆ. ಸಿ.ಟಿ. ರವಿ ವಿರುದ್ಧ ಹೋರಾಟ ಮುಂದುವರಿಸುವೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್‌ಎಸ್‌ಎಲ್ ವರದಿ ಬೇಗ ಬಹಿರಂಗವಾಗಬೇಕು. ಬಿಜೆಪಿಯವರು ಇಂಥ ಸಂದರ್ಭದಲ್ಲೂ ಸಿ.ಟಿ. ರವಿ ಬೆನ್ನಿಗೆ ನಿಂತಿದ್ದಾರೆ ಇದು ನಾಚಿಕೆಗೇಡು ಎಂದು ಸಚಿವರು ಕಿಡಿಕಾರಿದರು.
ಸಿ.ಟಿ. ರವಿ ಅವರಿಗೆ ಏನಾಗಿದೆ ಗಾಯ? ಎಷ್ಟಾಗಿದೆ ಗಾಯ. ಪೊಲೀಸರು ಎನ್‌ಕೌಂಟರ್ ಮಾಡುತ್ತಿದ್ದರು ಅಂತಾರಲ್ಲಾ, ನಾಚಿಕೆ ಆಗಲ್ವ ನಿಮಗೆ. ಇಡೀ ಕರ್ನಾಟಕದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಏನು ಮಾಡಬೇಕು ಅದನ್ನು ಮಾಡಿದ್ದಾರೆ. ಪ್ರಕರಣದ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಿ.ಟಿ. ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ, ಸಾಧ್ಯವಾದರೆ ಅವರನ್ನು ಭೇಟಿಯಾಗುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Previous articleಅಂಗಡಿ ಹಾಕಲು ಮುಸ್ಲಿಮ್‌ರಿಗೆ ನಿರ್ಬಂಧ
Next articleಕಾಂಗ್ರೆಸ್‌ನಲ್ಲಿ ಈಗಿರುವವರೆಲ್ಲ ನಕಲಿ ಗಾಂಧಿಗಳು